ರಾಜಸ್ತಾನ
ಭಾರತದ ಗಣರಾಜ್ಯದ ಒಂದು ರಾಜ್ಯ. ಭಾರತದ ವಾಯುವ್ಯ ಭಾಗದ ಸರಹದ್ದು ರಾಜ್ಯವಾಗಿರುವ ಇದನ್ನು ಪಶ್ಚಿಮ ಮತ್ತು ವಾಯುವ್ಯ ದಿಕ್ಕುಗಳಲ್ಲಿ ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯೂ ಉತ್ತರ ಮತ್ತು ಈಶಾನ್ಯಕ್ಕೆ ಅನುಕ್ರಮವಾಗಿ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳೂ ಪೂರ್ವಕ್ಕೆ ಉತ್ತರ ಪ್ರದೇಶವೂ ಆಗ್ನೇಯ ಮತ್ತು ದಕ್ಷಿಣದಲ್ಲಿ ಮಧ್ಯಪ್ರದೇಶವೂ ನೈಋತ್ಯ ಮತ್ತು ದಕ್ಷಿಣಕ್ಕೆ ಗುಜರಾತ್ ರಾಜ್ಯವೂ ಸುತ್ತುವರೆದಿವೆ. ರಾಜ್ಯವನ್ನು 30 ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ವಿಸ್ತೀರ್ಣ 342,239 ಚಕಿಮೀ. ಜನಸಂಖ್ಯೆ 5,64,73,122 (2001). ರಾಜಧಾನಿ ಜಯಪುರ.
ಭೌತಲಕ್ಷಣಗಳು : ಮಧ್ಯಪ್ರದೇಶವನ್ನು ಹೊರತುಪಡಿಸಿ ಭಾರತ ಒಕ್ಕೂಟದ ಅತ್ಯಂತ ದೊಡ್ಡ ರಾಜ್ಯವಾದ ರಾಜಸ್ತಾನ ವೈವಿಧ್ಯಮಯವಾದ ಭೌತಲಕ್ಷಣಗಳನ್ನು ಹೊಂದಿರುವ ರಾಜ್ಯ. ಮೇಲ್ಮೈಲಕ್ಷಣದ ದೃಷ್ಟಿಯಿಂದ ರಾಜ್ಯವನ್ನು ಸ್ಥೂಲವಾಗಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಬಹುದು. (1) ಪಶ್ಚಿಮದ ಮರುಭೂಮಿ (2) ದಕ್ಷಿಣದ ಪರ್ವತ ಪ್ರದೇಶ (3) ಆಗ್ನೇಯ ಮತ್ತು ಪೂರ್ವದ ಇಳಿಜಾರು ಪ್ರದೇಶ (4) ಉತ್ತರದ ಮತ್ತು ಮಧ್ಯಭಾಗದ ಒಣ ಪ್ರದೇಶ.

ರಾಜಸ್ತಾನದ ಪಶ್ಚಿಮ ಭಾಗದಲ್ಲಿರುವ ಬರ್ಮರ್, ಜೈಸಲ್ಮೇರ್, ಬಿಕನೇರ್ ಮತ್ತು ಜೋಧಪುರ್ ಜಿಲ್ಲೆಗಳು ವಿಸ್ತಾರವಾದ ಥಾರ್ ಮರುಭೂಮಿಯ ಭಾಗಗಳಾಗಿವೆ. ಈ ಮರುಭೂಮಿ ದಕ್ಷಿಣಕ್ಕೆ ಕಚ್‍ನ ರಣ್ ಪ್ರದೇಶದಿಂದ ಉತ್ತರದಲ್ಲಿ ಪಾಕಿಸ್ತಾನದ ಗಡಿಯುದ್ದಕ್ಕೂ ಉಭಯ ದೇಶಗಳಲ್ಲೂ ವ್ಯಾಪಿಸಿದೆ. ಥಾರ್ ಎಂದರೆ ಮರಳು ಗುಡ್ಡಗಳು ಎಂದರ್ಥ. (ನೋಡಿ- ಥಾರ್-ಮರುಭೂಮಿ) ಇಡೀ ಮರುಭೂಮಿ ಅಲೆ ಅಲೆಯಾಗಿ ಹಬ್ಬಿದೆ. ಕೆಲವೊಮ್ಮೆ ಮರಳಿನ 16031 ಮೀ ಎತ್ತರ ಇರುವುದು ಕಾಣುತ್ತದೆ. ಇಲ್ಲಿ ಜನವಸತಿಗೆ ಪೂರಕವಾದ ಸಸ್ಯವರ್ಗ ಮತ್ತು ಜಲಸಂಪನ್ಮೂಲ ಕಡಿಮೆ. ಅಲ್ಲಲ್ಲಿ ಕಂಡುಬರುವ ನೀರಿನ ಹೊಂಡಗಳೂ ಬೇಸಗೆಯಲ್ಲಿ ಒಣಗಿ ಹೋಗುತ್ತವೆ. ಜೊತೆಗೆ ಮರಳು ದಿಣ್ಣೆಗಳು ಆಗಾಗ ಸವೆತಕ್ಕೊಳಗಾಗುವುದೂ ಉಂಟು. ಆದ್ದರಿಂದ ಇಲ್ಲಿ ವ್ಯವಸಾಯವನ್ನು ಅವಲಂಬಿಸಿರುವ ಸ್ಥಿರ ಗ್ರಾಮಗಳು ವಿರಳ. ಗ್ರಾಮಗಳ ಜನರು ಆಗಾಗ ತಮ್ಮ ವಸತಿಯನ್ನು ಅಲ್ಲಿಯ ಹವೆಯನ್ನು ಅನುಸರಿಸಿ ಬದಲಾಯಿಸಬೇಕಾಗುತ್ತದೆ.
ರಾಜಸ್ತಾನದ ಪ್ರಧಾನ ಮೇಲ್ಮೈ ಲಕ್ಷಣ ಭಾರತ ಪರ್ಯಾಯದ್ವೀಪದ ಮುಖ್ಯ ಬೆಟ್ಟ ಶ್ರೇಣಿಗಳಲ್ಲೊಂದಾದ ಅರಾವಳಿ ಬೆಟ್ಟಶ್ರೇಣಿಯಿಂದ ನಿರ್ಧರಿತ. ರಾಜಸ್ತಾನದ ಮಧ್ಯೆ ಈಶಾನ್ಯ ನೈಋತ್ಯ ದಿಕ್ಕಿನಲ್ಲಿ ಈ ಬೆಟ್ಟ ಶ್ರೇಣಿ ಹಬ್ಬಿದ್ದು ಥಾರ್ ಮರುಭೂಮಿಯ ಪೂರ್ವಾಭಿಮುಖ ವಿಸ್ತರಣೆಯನ್ನು ತಡೆದಿದೆ. ಈ ಶ್ರೇಣಿಗೆ ಸೇರಿದ ದಕ್ಷಿಣ ರಾಜಸ್ತಾನದಲ್ಲಿ ಅಬು ಪರ್ವತಶ್ರೇಣಿ ಇದೆ. (1722 ಮೀ). ಈ ಪರ್ವತಸಾಲು ಅಜ್ಮೀರದವರೆಗೂ ಹಬ್ಬಿ ರಾಜಸ್ತಾನದ ನೀರಿನ ಹರಿವನ್ನು ನಿರ್ಧರಿಸುವ ಅಂಶವಾಗಿಯೂ ಪರಿಣಮಿಸಿದೆ. ಅಜ್ಮೀರದಿಂದ ಮುಂದೆ ದೆಹಲಿಯ ಕಡೆಗೆ ಅಲ್ಲೊಂದು ಇಲ್ಲೊಂದು ಕಂಡುಬರುವ ಬೆಟ್ಟಗಳು ರಾಜಸ್ತಾನದ ಮಧ್ಯಭಾಗವನ್ನು ಪ್ರಸ್ಥಭೂಮಿಯಾಗಿ ಪರಿವರ್ತಿಸಿದೆ. ಈ ಶ್ರೇಣಿಯಿಂದಾಗಿ ರಾಜ್ಯದ ಪಶ್ಚಿಮ, ವಾಯುವ್ಯ ಮತ್ತು ಉತ್ತರ ಭಾಗಗಳಲ್ಲಿ ಮರಳುಗಾಡು ಮತ್ತು ಬರಪ್ರದೇಶ ಕಂಡುಬಂದರೆ ದಕ್ಷಿಣ, ಆಗ್ನೇಯ ಮತ್ತು ಪೂರ್ವ ಭಾಗದಲ್ಲಿ ಬೆಟ್ಟಗುಡ್ಡಗಳಿಂದ ಕೂಡಿದ, ಸಸ್ಯವರ್ಗವಿರುವ ಫಲವತ್ತಾದ ಪ್ರದೇಶ ಕಂಡುಬರುತ್ತದೆ.
ಉದಯಪುರ ಹಾಗೂ ಮೇವಾರ ಪ್ರದೇಶ ಎತ್ತರದ ಪ್ರಸ್ಥಭೂಮಿಯಾಗಿದ್ದು ಅನೇಕ ನದಿಗಳಿಗೆ ಆಶ್ರಯಸ್ಥಾನವಾಗಿದೆ. ಅಬು ಪರ್ವತದಿಂದ ಪ್ರಾರಂಭವಾಗುವ ದಕ್ಷಿಣ ಪರ್ವತ ಪ್ರದೇಶ ಚಿತ್ತೋಡ್‍ಗಡ, ಜಲ್‍ವಾರ್, ಬುಂದಿ ಮತ್ತು ಕೊಟ ಜಿಲ್ಲೆಗಳಲ್ಲಿ ಹಬ್ಬಿದೆ. ಗುಜರಾತ್ ಮತ್ತು ಮಧ್ಯಪ್ರದೇಶದ ಗಡಿಗಳುದ್ದಕ್ಕೂ ಕಣಿವೆ ಕಂದರಗಳಿವೆ.

ಬುಂದಿ ಮತ್ತು ಟೊಂಕ್ ಜಿಲ್ಲೆಗಳ ಮುಂದಿನ ಪೂರ್ವಭಾಗ ಈಶಾನ್ಯದ ಕಡೆಗೆ ಇಳಿಜಾರಾಗಿ ದೊಡ್ಡ ಚಂಬಲ್ ಕಣಿವೆ ನಿರ್ಮಾಣವಾಗಿದೆ. ಇದು ಉತ್ತರ ಪ್ರದೇಶದ ಆಗ್ರಾದವರೆಗೂ ಮುಂದುವರೆದಿದ್ದು ರಾಜಸ್ತಾನದ ಪೂರ್ವ ಭಾಗದ ಹೆಚ್ಚಿನ ಪ್ರಮಾಣದ ನೀರಿನ ಹರಿವು ಚಂಬಲ್ ನದಿಯ ಮೂಲಕ ಯಮುನಾ ನದಿಯನ್ನು ಸೇರುತ್ತದೆ. ಧೋಲ್‍ಪುರ, ಸವಾಯಿ ಮಾಧೋಪುರ ಮತ್ತು ಭರತಪುರ ಹಾಗೂ ಆಳ್ವಾರ್ ಜಿಲ್ಲೆಗಳು ದುರ್ಗಮ ಬೆಟ್ಟಪ್ರದೇಶಗಳಾಗಿದ್ದರೂ ಅಲ್ಲಲ್ಲಿ ಫಲವತ್ತಾದ ಸಮತಟ್ಟು ಬಯಲುಗಳನ್ನು ಹೊಂದಿವೆ. ಈ ಅರಾವಳಿಯ ಬೆಟ್ಟಸಾಲು ಉತ್ತರದ ಕಡೆ ಅಲೀಪುರದ ಬಳಿ ಸು. 450 ಮೀ ಎತ್ತರದಲ್ಲಿದೆ. ಕರೌಲಿ ಸುತ್ತಮುತ್ತ 530ಮೀ. ಎತ್ತರದ ಪ್ರಸ್ಥಭೂಮಿ ಇದೆ.

ಜಯಪುರದ ಉತ್ತರ ದಿಕ್ಕಿನ ಭೂಪ್ರದೇಶ ಸಮತಟ್ಟಾಗಿದೆ. ಥಾರ್ ಮರುಭೂಮಿ ಮತ್ತು ಅರಾವಳಿ ಬೆಟ್ಟಶ್ರೇಣಿಗಳ ಮಧ್ಯ ಬರುವ ನಾಗೌರ್, ಚುರು ಮತ್ತು ಗಂಗಾನಗರ ಜಿಲ್ಲೆಗಳು ಬರಡು ಪ್ರದೇಶಗಳಾಗಿವೆ. ಇಲ್ಲಿ ಜಲಸಂಪನ್ಮೂಲ ಹಾಗೂ ಸಸ್ಯವರ್ಗ ಕಡಿಮೆ. ಮರಳು ಮಿಶ್ರಿತ ನೆಲ ಏಕರೂಪದ ಭೂದೃಶ್ಯವನ್ನು ಸೃಷ್ಟಿಸಿದೆ. ಅಲ್ಲಲ್ಲಿ ಉಪ್ಪುನೀರಿನ ಸರೋವರಗಳಿವೆ. ದಿದ್ವಾನ್, ಕುಚಮನ್ ಮತ್ತು ಸಾಂಬರ್ ಇವು ನಾಗೌರ್ ಜಿಲ್ಲೆಯಲ್ಲಿರುವ ಮುಖ್ಯ ಉಪ್ಪುನೀರಿನ ಸರೋವರಗಳು.

ನದಿ ಮತ್ತು ಸರೋವರಗಳು : ಇಲ್ಲಿನ ನದಿಗಳಿಗೆ ಅರಾವಳಿ ಬೆಟ್ಟಶ್ರೇಣಿಯೇ ಮುಖ್ಯ ಉಗಮ ಸ್ಥಾನ. ಪರ್ವತದ ಪೂರ್ವಭಾಗದ ದುರ್ಗಮ ಪ್ರದೇಶದಲ್ಲಿ ಮತ್ತು ಮೇವಾರ್ ಪ್ರಸ್ಥಭೂಮಿಯಲ್ಲಿ ಬೀಳುವ ಮಳೆ ನೀರು ಈಶಾನ್ಯಾಭಿಮುಖವಾಗಿ ಹರಿಯುತ್ತದೆ. ಚಂಬಲ್ ಕಣಿವೆಯತ್ತ ಸಾಗುವ ಈ ತೊರೆಗಳು ಚಂಬಲ್ ನದಿಯನ್ನು ಸೇರುತ್ತವೆ. ಚಂಬಲ್ ನದಿ ರಾಜ್ಯದ ದೊಡ್ಡ ನದಿಯಾಗಿದ್ದು ವರ್ಷದ ಎಲ್ಲ ಕಾಲದಲ್ಲೂ ತುಂಬಿ ಹರಿಯುತ್ತದೆ. ಇದರ ಮುಖ್ಯ ಉಪನದಿಯಾದ ಅರಾವಳಿಯ ಕುಂಬಲ್‍ಗರ್ ಬಳಿ ಹುಟ್ಟುತ್ತದೆ. ಕಿನು, ಪ್ರಭತಿ, ಪರ್ವಾನ್, ಕಾಲೀಸಿಂದ್ ಮೊದಲಾದ ತೊರೆಗಳು ಚಂಬಲ್ ನದಿಯನ್ನು ಅದರ ಬಲಪಾಶ್ರ್ವದಿಂದ ಬಂದು ಸೇರುತ್ತವೆ. ಚಂಬಲ್ ನದಿ ಆಗ್ರಾದ ಕೆಳಭಾಗದಲ್ಲಿ ಯಮುನಾ ನದಿಯನ್ನು ಕೂಡುತ್ತದೆ.

ಚಂಬಲ್ ಕಣಿವೆಯ ಉತ್ತರಕ್ಕಿರುವ ಅರಾವಳಿಯ ಇಳಿಜಾರಿನ ನೀರನ್ನು ರಾಜಸ್ತಾನದ ಎರಡನೆಯ ದೊಡ್ಡ ನದಿ ಬಾನಗಂಗಾ ಮತ್ತು ಸಬೀ ನದಿಗಳು ಯಮುನಾ ನದಿಗೆ ಕೊಂಡೊಯ್ಯುತ್ತದೆ. ಅರಾವಳಿಯ ಪೂರ್ವದ ಇಳಿಜಾರಿನಲ್ಲಿ ಹುಟ್ಟುವ ಕೆಲವು ನದಿಗಳು ಸಾಂಬರ್ ಸರೋವರವನ್ನು ಸೇರುತ್ತವೆ. ರಾಜಸ್ತಾನದ ನೈಋತ್ಯ ಭಾಗದಲ್ಲಿರುವ ಮಹತ್ತ್ವದ ನದಿ ಲೂನಿ. ಇದು ಅಜ್ಮೀರ್ ಬಳಿಯ ಪುಷ್ಕರ್ ಕಣಿವೆಯಲ್ಲಿ ಹುಟ್ಟಿ 320ಕಿಮೀ ದೂರ ನೈಋತ್ಯಕ್ಕೆ ಹರಿದು ಕಚ್‍ನ ರಣ್ ಅನ್ನು ಸೇರುತ್ತದೆ. ಇದಕ್ಕೆ ಅಬು ಪರ್ವತ ತಪ್ಪಲಿನಿಂದ ಹರಿದು ಬರುವ ಸುಕ್ರಿನದಿ ಪ್ರಮುಖ ಉಪನದಿ.
ರಾಜಸ್ತಾನದ ಥಾರ್ ಮರುಭೂಮಿಯಲ್ಲಿ ಮತ್ತು ಉತ್ತರದ ಒಣ ಪ್ರದೇಶದ ಜಿಲ್ಲೆಗಳಲ್ಲಿ ನದಿಗಳಿಲ್ಲ. ಅಲ್ಲಲ್ಲಿ ಉಪ್ಪಿನ ಸರೋವರಗಳು ಕಂಡುಬರುತ್ತವೆ. ಇವು ಬೇಸಿಗೆಯಲ್ಲಿ ಒಣಗಿ ಹೋಗುತ್ತವೆ. ಒಳನಾಡಿನಲ್ಲಿ ಮೇವಾರ್‍ನ ಧೇಬರ್ ಸರೋವರ, ಕಾಂಕ್ರೊಲಿ ಬಳಿಯ ರಾಜ ಸಮಂದ್, ಉದಯಪುರದ ಪಿಛೊಲ ಸರೋವರ, ನಾಗೌರ್‍ನ ಸಾಂಬರ್ ಸರೋವರಗಳು ಪ್ರಮುಖವಾಗಿವೆ.
ಮಣ್ಣು : ಅರಾವಳಿ ವಲಯ ಚೌಳುಮಣ್ಣಿನಿಂದ ಕೂಡಿದೆ. ಮಣ್ಣಿನಲ್ಲಿರುವ ನೈಟ್ರೇಟ್ ಅಂಶಗಳು ಫಲವತ್ತತೆಯನ್ನು ಹೆಚ್ಚಿಸಿವೆ. ಇಲ್ಲಿ ನೀರು 30 ರಿಂದ 60 ಮೀ. ಆಳದಲ್ಲಿದೆ. ನಾಗೌವರ್ ಜಿಲ್ಲೆಯ ನೈಋತ್ಯ ಭಾಗ ಮೆಕ್ಕಲು ಮಣ್ಣಿನಿಂದ ಕೂಡಿದೆ. ಆಗ್ನೇಯ ಭಾಗ ಉಪ್ಪು ಮಣ್ಣಿನಿಂದ ಕೂಡಿದೆ. ಅಜ್ಮೀರ್ ಜಿಲ್ಲೆಯ ಸುತ್ತಮುತ್ತಲಿನಲ್ಲಿ ಮರಳು ಮಿಶ್ರಿತ ಮಣ್ಣಿದೆ. ಜೇಡಿಮಣ್ಣಿನ ಪ್ರಮಾಣ ಮೂರರಿಂದ ಒಂಭತ್ತರ ಶೇಕಡಾಂಶದವರೆಗೂ ವ್ಯತ್ಯಾಸಗೊಂಡಿರುತ್ತದೆ. ಜಯಪುರ ಮತ್ತು ಆಳ್ವಾರ್ ಜಿಲ್ಲೆಗಳಲ್ಲಿ ಮರಳು ಮಿಶ್ರಿತ ಜೇಡಿಮಣ್ಣು ಇದ್ದು ನೆಲ ಫಲವತ್ತಾಗಿದೆ. ಕೊಟ, ಬುಂದಿ ಮತ್ತು ಜಲ್‍ವಾರ್ ಜಿಲ್ಲೆಗಳಲ್ಲಿ ಕಪ್ಪು ಮಣ್ಣಿನ ಬಯಲುಗಳಿವೆ. ಪೂರ್ವಭಾಗದ ಜಿಲ್ಲೆಗಳಲ್ಲಿ ಕೆಂಪು ಮತ್ತು ಕಪ್ಪು ಮಿಶ್ರಿತ ಮಣ್ಣಿದ್ದರೆ ಮರಳುಗಾಡಿನ ಪಶ್ವಿಮ ಭಾಗದ ಜಿಲ್ಲೆಗಳಲ್ಲಿ ಕೆಂಪು ಮತ್ತು ಹಳದಿ ಮಿಶ್ರಿತ ಮಣ್ಣಿದೆ. ಜೋಧ್‍ಪುರದ ಸುತ್ತ ಕಂದುಬೂದಿ ಬಣ್ಣದ ಮರಳು ಕಂಡುಬರುತ್ತದೆ. ಒಟ್ಟಿನಲ್ಲಿ ರಾಜ್ಯದ ಅರಾವಳಿ ವಲಯ ಕೃಷಿಗೆ ಯೋಗ್ಯವಾದ ಪ್ರದೇಶವಾದರೆ ಮರಳು ಭೂಮಿ ಮತ್ತು ಅರೆಮರುಭೂಮಿ ಪ್ರದೇಶಗಳು ಕೃಷಿಯೋಗ್ಯವಾಗಿಲ್ಲ.

ವಾಯುಗುಣ : ಈ ರಾಜ್ಯದಲ್ಲಿ ಒಣ ಹವೆ ಮತ್ತು ತೇವಾಂಶದಿಂದ ಕೂಡಿದ ಹವೆ ಇರುವ ವೈವಿಧ್ಯಮಯ ಹವಾಗುಣವಿದೆ. ದಕ್ಷಿಣದ ನಿರೊಹಿ, ಬನ್ಸ್‍ವಾರ್ ಮತ್ತು ಜಲೋರ್ ಜಿಲ್ಲೆಗಳಲ್ಲಿ ಅಧಿಕ ತೇವಾಂಶವುಳ್ಳ ವಾಯುಗುಣ ಕಂಡುಬರುವುದು. ಗುಡ್ಡಪ್ರದೇಶಗಳಲ್ಲಿ ತಂಪುಹವೆ ಇರುತ್ತದೆ. ಉಳಿದ ಎಲ್ಲೆಡೆ ಬೇಸಗೆಯಲ್ಲಿ ಅಧಿಕ ಒಣಹವೆ ಕಂಡುಬರುತ್ತದೆ. ಮರುಭೂಮಿ ಪ್ರದೇಶದಲ್ಲಿ ಸರಾಸರಿ ಬೇಸಗೆ ಉಷ್ಣತೆ 400 ಸೆಲ್ಸಿಯಸ್ ನಿಂದ 420 ಸೆಲ್ಸಿಯಸ್ ಇರುತ್ತದೆ. 1998 ರ ಬೇಸಗೆಯಲ್ಲಿ ಮರುಭೂಮಿಯ ಕೆಲವೆಡೆ 490 ಸೆಲ್ಸಿಯಸ್‍ಗಳಷ್ಟು ಅಧಿಕ ಉಷ್ಣತೆ ದಾಖಲಾದ ವರದಿಯಾಗಿದೆ. ಚಳಿಗಾಲದಲ್ಲಿ ಉಷ್ಣತೆ 24.50 ಸೆಲ್ಸಿಯಸ್ ನಿಂದ 20 ಸೆಲ್ಸಿಯಸ್ ವರೆಗೂ ಇರುತ್ತದೆ. ರಾತ್ರಿ ವೇಳೆ ಮರುಭೂಮಿಯಲ್ಲಿ ನೀರು ಹಿಮಗಟ್ಟುವುದೂ ಉಂಟು. ಕೆಲವು ವೇಳೆ ಶೀತ ಮಾರುತಗಳಿಂದ ಉಷ್ಣತೆ 20-ಸೆಲ್ಸಿಯಸ್‍ನಿಂದ-50 ಸೆಲ್ಸಿಯಸ್ ವರೆಗೆ ಇಳಿಯುತ್ತದೆ. ಅರಾವಳಿ ಪರ್ವತ ಶ್ರೇಣಿಯಲ್ಲಿ ಕೆಲವೊಮ್ಮೆ ಬೇಸಗೆಯಲ್ಲಿ ಮಳೆ ಬರುವುದುಂಟು. ಮರುಭೂಮಿಯಲ್ಲಿ ಮಳೆಬಲು ವಿರಳ. ಪಶ್ವಿಮದ ಮರುಭೂಮಿಯಲ್ಲಿ ವಾರ್ಷಿಕ ಸರಾಸರಿ ಮಳೆ 10 ಸೆಂ.ಮೀ. ನೈಋತ್ಯ ಭಾಗದಲ್ಲಿ ಸ್ವಲ್ಪ ಅಧಿಕಮಳೆಯಾಗುವುದು ಉಂಟು. ಸಾಮಾನ್ಯವಾಗಿ ಜೂನ್ ಕೊನೆಯ ವೇಳೆಗೆ ಮಾನ್‍ಸೂನ್ ಮಳೆ ಪ್ರಾರಂಭವಾಗುತ್ತದೆ.

ಜೈಸಲ್ಮೇರ್, ಜೋಧ್‍ಪುರ್ ಮತ್ತು ಬಿಕನೇರ್ ಜಿಲ್ಲೆಗಳ ಭಾಗಗಳಲ್ಲಿ ವಾರ್ಷಿಕ ಸರಾಸರಿ ಮಳೆ 15 ರಿಂದ 18 ಸೆಂ.ಮೀ. ಅಬು ಪರ್ವತದಲ್ಲಿ 1875 ಮತ್ತು 1881 ರಲ್ಲಿ 250ಸೆಮೀ ಮಳೆಯಾದ ದಾಖಲೆಯಿದೆ. ಮಾನ್‍ಸೂನ್ ಮಳೆಗಳು ವಿಫಲವಾದಾಗ ಹಿಂಗಾರು ಮಳೆ ಬರುವ ಸಂಭವವಿರುತ್ತದೆ. ಆದರೆ ಮಳೆ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗೊಳ್ಳುತ್ತದೆ. ರಾಜಸ್ತಾನದ ಉತ್ತರದ ಬರಗಾಡು ಪ್ರದೇಶಕ್ಕೆ ವ್ಯತ್ಯಾಸಗೊಳ್ಳುತ್ತದೆ. ರಾಜಸ್ತಾನದ ಉತ್ತರದ ಬರಗಾಡು ಪ್ರದೇಶದಲ್ಲಿ ಮಳೆಯ ಪ್ರಮಾಣ 15ಸೆಂಮೀ ನಿಂದ 100 ಸೆಂಮೀ. ಗಳಷ್ಟು ವ್ಯತ್ಯಾಸ ಹೊಂದುತ್ತದೆ. 1880 ರ ದಶಕದಲ್ಲಿ ಈ ರಾಜ್ಯಗಳಲ್ಲಿ ವಿಪರೀತ ಪ್ರವಾಹ ಒಂದು ಕೆಲವು ಊರುಗಳು ಕೊಚ್ಚಿಹೋದ ಬಗ್ಗೆ ದಾಖಲೆ ಇದೆ. 1899 ರಲ್ಲಿ ಅಬು ಪರ್ವತದಲ್ಲಿ 325 ಸೆಂಮೀ ಮಳೆಯಾಗಿದ್ದು ಇದು ಅತಿ ಹೆಚ್ಚಿನ ದಾಖಲೆಯಾಗಿದೆ.

ಸಸ್ಯವರ್ಗ : ರಾಜಸ್ತಾನದಲ್ಲಿ 13.280 ಚಕಿಮೀ ಅರಣ್ಯ ಪ್ರದೇಶವಿದೆ. (1995). ಮರುಭೂಮಿಯ ಬಹುಭಾಗದಲ್ಲಿ ಮುಳ್ಳಿನ ಗಿಡಗಳು, ಕಳ್ಳಿ ಜಾತಿಯ ಸಸ್ಯಗಳು ಮತ್ತು ಅಲ್ಲಲ್ಲಿ ಕುರುಚಲು ಪೊದೆಗಳು ಕಂಡುಬರುತ್ತವೆ. ಹುಲ್ಲುಮಳೆಗಾಲದಲ್ಲಿ ಬೆಳೆಯುತ್ತದೆ. ಅರಾವಳಿಯ ಪರ್ವತಶ್ರೇಣಿಗೆ ಸಂಬಂಧಿಸಿದ ಬೆಟ್ಟಗುಡ್ಡಗಳಲ್ಲಿ ಹೆಚ್ಚಿನ ಸಸ್ಯವರ್ಗ ಕಂಡುಬರುತ್ತದೆಯಾದರೂ ಭಾರಿ ಗಾತ್ರದ ಮರಗಳು ಕಡಿಮೆ. ಕುರುಚಲು ಕಾಡುಗಳು ವ್ಯಾಪಕವಾಗಿವೆ. ಭರತಪುರ ವಲಯದಲ್ಲಿ ಹೆಚ್ಚಾಗಿ ಕಂಡುಬರುವ ಲಾಮಂಚದ ಗಿಡಗಳ ಬೇರನ್ನು ಸುಗಂಧದ್ರವ್ಯ ತಯಾರಿಕೆಗೆ ಬಳಸಲಾಗುತ್ತದೆ.
ಪ್ರಾಣಿವರ್ಗ : ಭಾರತದ ಇತರ ಭಾಗಗಳಲ್ಲಿ ಕಂಡುಬರುವ ಪ್ರಾಣಿಗಳೇ ರಾಜಸ್ತಾನದ ಕಾಡುಗಳಲ್ಲಿಯೂ ಇವೆ. ಇಲ್ಲಿನ ಕುರುಚಲು ಕಾಡು ಮತ್ತು ವಿಸ್ತಾರವಾದ ಹುಲ್ಲುಗಾವಲುಗಳಲ್ಲಿ ಜಿಂಕೆ, ಹುಲ್ಲೇಕರ ಸಾರಂಗ, ಸಾಂಬರ್, ನೀಲ್‍ಗಾಯ್, ಕಾಡುಕುರಿ ಮೊದಲಾದ ಸಸ್ಯಾಹಾರಿ ಪ್ರಾಣಿಗಳು ಇದ್ದಂತೆ ಅವನ್ನನುಸರಿಸಿ ಸಿಂಹ, ಹುಲಿ, ಚಿರತೆ, ತೋಳ, ಮೊದಲಾದ ಮಾಂಸಾಹಾರಿ ಪ್ರಾಣಿಗಳೂ ಇದ್ದವು. 1821 ರಲ್ಲಿ ಬುಂದಿಯ ಮಹಾರಾಜ ವಿಷನ್‍ಸಿಂಗ್ ನೂರು ಸಿಂಹಗಳನ್ನು ಕೊಂದನೆಂದು ಕರ್ನಲ್ ಟಾಡ್ ಬರೆದಿದ್ದಾನೆ. 1972 ರಲ್ಲಿ ಅರಾವಳಿ ಕಾಡುಗಳಲ್ಲಿ ಸಿಂಹಗಳಿದ್ದುದಕ್ಕೆ ಸಾಕ್ಷ್ಯ ದೊರೆತಿದೆ. ಅನಂತರ ಸಿಂಹಗಳು ಬೇಗ ಕಣ್ಮರೆಯಾದವು. ಕರಡಿಯೂ ಸೇರಿದಂತೆ ಉಳಿದ ಎಲ್ಲ ಬಗೆಯ ಪ್ರಾಣಿಗಳು ಈಗಲೂ ವಿರಳವಾಗಿ ಈ ಕಾಡುಗಳಲ್ಲಿ ಕಂಡುಬರುತ್ತವೆ. ಮೀನು ಹಿಡಿಯುವ ಕೊಕ್ಕರೆಗಳು, ಕಾಡು ಬಾತು ಪುರಲಿ, ಗವುಜ, ಮರಳು ಗಿಡುಗ, ಹದ್ದು, ಗರುಡ, ಕಾಡುಕೋಳಿ ಮೊದಲಾದ ಪಕ್ಷಿ ಸಂಕುಲವಿದೆ.
ಖನಿಜ ಸಂಪತ್ತು : ರಾಜಸ್ತಾನದ ಅಪಾರ ಮರಳು ರಾಶಿ ಗಾಜು ತಯಾರಿಕೆಗೆ ಉಪಯುಕ್ತವಾಗಿದೆ. ಇಲ್ಲಿನ ಸರೋವರಗಳು ಮತ್ತು ಕೆರೆಗಳು ಉಪ್ಪು ತಯಾರಿಕೆಯ ಆಗರಗಳಾಗಿವೆ. ಇಲ್ಲಿ ದೊರಕುವ ಶಿಲೆ ಮರಳು, ಸುಣ್ಣಶಿಲೆ ಮತ್ತು ಅಮೃತ ಶಿಲೆಗಳನ್ನು ಕಟ್ಟಡಗಳ ನಿರ್ಮಾಣಕ್ಕೂ ಅಲಂಕಾರಕ್ಕೂ ಬಳಸುತ್ತಾರೆ. ಉದಯಪುರ ಜಿಲ್ಲೆಯಲ್ಲಿ ಸೀಸ, ತವರ, ಅಭ್ರಕ, ಬಳಪದಕಲ್ಲು (ಸ್ವಯಟೈಟ್) ಮತ್ತು ಕಲ್ನಾರುಗಳು ಸಿಗುತ್ತವೆ. ಭಾರಿ ಪ್ರಮಾಣದ ಜಿಪ್ಸಂ ನಿಕ್ಷೇಪವಿದೆ. ಇದನ್ನು ರಾಸಾಯನಿಕ ಗೊಬ್ಬರ ತಯಾರಿಸಲು ಬಿಹಾರಕ್ಕೆ ಕಳುಹಿಸಲಾಗುತ್ತಿದೆ. ಬೆಂಟೋನೈಟ್, ಬಳಪದಕಲ್ಲು, ಟಂಗ್‍ಸ್ಟನ್‍ಗಳು ಸಾಕಷ್ಟು ದೊರೆಯುತ್ತವೆ. ಬಿಲ್ವಾರ ಜಿಲ್ಲೆ ಮತ್ತಿತರ ಕಡೆಗಳಲ್ಲಿ ಕಬ್ಬಿಣ ಮತ್ತು ತಾಮ್ರದ ಅದುರಿನ ನಿಕ್ಷೇಪಗಳಿವೆ. ರಾಷ್ಟ್ರದ ಏಕೈಕ ಸೀಸ ಮತ್ತು ಸತುವಿನ ಗಣಿ ಉದಯಪುರದ ಬಳಿಯ ಚಾವರ್‍ನಲ್ಲಿದೆ. ಸುಣ್ಣಶಿಲೆ ಮತ್ತು ಹಾಸುಗಲ್ಲುಗಳು ಉಮ್ರಾರ್ ಮತ್ತು ಜಯಪುರದ ಸುತ್ತಮುತ್ತ ಸಿಗುತ್ತದೆ. ಗತಕಾಲದ ಹಿಮನದಿ ಕಾರ್ಯದಿಂದಾದ ಮೆರುಕಲಗುಪ್ಪೆ (ಮೊರೈನ್ಸ್) ಸಂಚಯನಗಳು ಜೈಸಲ್ಮೇರ್‍ನಲ್ಲಿ ಕಾಣಸಿಗುತ್ತವೆ. ಇದೇ ತೆರನಾದ ಮುರುಕಲಗುಪ್ಪೆ ಸಂಚಯನಗಳು (ಗೊಂಡ್ವಾನ ಯುಗಕ್ಕೆ ಸೇರಿದ) ಜೋಧಪುರದ ಸಮೀಪ ಹಾಗೂ ಪೊಕ್ರಾನ್‍ನಲ್ಲಿ ಕಾಣಬರುತ್ತವೆ. ಇವನ್ನು ಬಾಪ್ ಪದರಗಳು ಎಂದು ಕರೆಯುವುದಿದೆ. ರಾಜಸ್ತಾನದ ಆಗ್ನೇಯದಲ್ಲಿರುವ ಬಿಕನೇರ್, ಜೈಸಲ್ಮೇರ್ ಪ್ರದೇಶಗಳು ಇಯೋಸೀನ್ ಕಾಲದಲ್ಲಿ ಸಮುದ್ರದಿಂದ ಆವರಿಸಿದ್ದವು. ಕೆಳದರ್ಜೆಯ ಕಲ್ಲಿದ್ದಲು ಲಿಗ್‍ನೈಟ್ ಪದರಗಳು ಪಲಾನ ಎಂಬಲ್ಲಿ ದೊರೆಯುತ್ತವೆ. ರಾಜಸ್ತಾನದಲ್ಲಿ ಒಳ್ಳೆಯ ಗುಣಮಟ್ಟದ ಪಚ್ಚೆ, ಅಕ್ವಮೆರೀನ್ ಮತ್ತು ಕೆಂಪು ರತ್ನಶಿಲೆಗಳೂ ದೊರೆಯುತ್ತವೆ.

ವ್ಯವಸಾಯ : ರಾಜಸ್ತಾನ ಮುಖ್ಯವಾಗಿ ವ್ಯವಸಾಯ ಪ್ರಧಾನ ರಾಜ್ಯ. ಬಾಜ್ರ, ಜೋಳ, ಸಜ್ಜೆ, ಗೋಧಿ, ಸಾಸಿವೆ ಹಾಗೂ ಬಾರ್ಲಿ ಇವು ಇಲ್ಲಿನ ಮುಖ್ಯ ಬೆಳೆಗಳು. ಮರಳುಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ದ್ವಿದಳಧಾನ್ಯಗಳು ಮತ್ತು ಎಣ್ಣೆ ಕಾಳುಗಳನ್ನು ಬೆಳೆಯಲಾಗುತ್ತದೆ. ರಾಜ್ಯದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಹತ್ತಿ ಮತ್ತು ಹೊಗೆಸೊಪ್ಪು ಮುಖ್ಯ ವಾಣಿಜ್ಯ ಬೆಳೆಗಳು. ನೀರಾವರಿ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಮಾನ್‍ಸೂನ್ ಮಳೆಯ ಅನಿಶ್ಚಿತತೆಯಿಂದಾಗಿ ವ್ಯವಸಾಯ ಜೂಜಾಟದಂತೆ ಆತಂಕಕಾರಿಯಾಗಿರುತ್ತದೆ. ನೀರಾವರಿ ಇರುವ ಪ್ರದೇಶಗಳಲ್ಲಿ ಭತ್ತ ಮತ್ತು ಕಬ್ಬುಗಳನ್ನು ಬೆಳೆಯುತ್ತಾರೆ. ಜೈಸಲ್ಮೇರ್ ಸುತ್ತಲ ಮರಳು ಭೂಮಿಯಲ್ಲಿ ಜನರು ನೆಲೆನಿಂತು ಬೇಸಾಯ ಮಾಡುವುದು ಕಡಿಮೆ. ಮಳೆಯನ್ನು ಅವಲಂಬಿಸಿ ಅಲೆಮಾರಿ ಬೇಸಾಯ ಮಾಡುವುದುಂಟು. ಸ್ವಾತಂತ್ರ್ಯ ಪೂರ್ವದಲ್ಲಿ ರಾಜಸ್ತಾನ ಆಹಾರ ಕೊರತೆಯ ರಾಜ್ಯವಾಗಿತ್ತು. ವಿವಿಧ ಯೋಜನೆಗಳಿಂದ ನೀರಾವರಿ ಏರ್ಪಟ್ಟ ಮೇಲೆ ಈಗ ಸ್ವಾವಲಂಬಿಯಾಗಿದೆ. ಕೆಲವು ವಾಣಿಜ್ಯ ಬೆಳೆಗಳನ್ನು ರಫ್ತು ಮಾಡಲಾಗುತ್ತದೆ. ರಾಜ್ಯದಲ್ಲಿ ಒಟ್ಟು 274.71 ಲಕ್ಷ ಹೆಕ್ಟೇರ್ ಸಾಗುವಳಿ ಪ್ರದೇಶವಿದೆ. ಇದರಲ್ಲಿ 53.56 ಲಕ್ಷ ಹೆಕ್ಟೇರ್ ಜಮೀನು ನೀರಾವರಿ ಸೌಲಭ್ಯ ಹೊಂದಿದೆ. 1994-95 ವ್ಯವಸಾಯ ಉತ್ಪಾದನೆಯ ಅಂದಾಜು 130.3 ಟನ್‍ಗಳು. 2003-04ರ ಸಾಲಿನಲ್ಲಿ 134.12 ಲಕ್ಷ ಹೆಕ್ಟೇರ್ ಭೂಮಿಯನ್ನು ಉಳುಮೆ ಮಾಡಿದ್ದು 60.32 ಲಕ್ಷ ಟನ್‍ಗಳ ಧಾನ್ಯೋತ್ಪತ್ತಿಯನ್ನು ನಿರೀಕ್ಷಿಸಿತ್ತು.

ರಾಜಸ್ತಾನ ಜಾನುವಾರು ಸಾಕಣೆಯಲ್ಲಿ ಭಾರತದಲ್ಲೇ ಪ್ರಥಮಸ್ಥಾನ ಪಡೆದಿದೆ. ದನಕರುಗಳು, ಒಂಟೆಗಳು, ಕುರಿಗಳು ಅಪಾರ ಸಂಖ್ಯೆಯಲ್ಲಿವೆ. ಒಂಟೆಗಳನ್ನು ಉಳುಮೆ, ಸರಕು ಸಾಗಣೆ ಹಾಗೂ ಸಂಚಾರಕ್ಕೆ ಬಳಸುತ್ತಾರೆ. ರಾಜಸ್ತಾನ ಭಾರತದ ಅತಿದೊಡ್ಡ ಉಣ್ಣೆ ತಯಾರಿಸುವ ರಾಜ್ಯ. ಒಣ ಪ್ರದೇಶಗಳಲ್ಲಿ ಉಪ ಜೀವನಕ್ಕೆ ಜನರು ಹೆಚ್ಚಾಗಿ ಜಾನುವಾರುಗಳನ್ನು ಅವಲಂಬಿಸಿದ್ದಾರೆ. ಹಾಲು ಮತ್ತು ಹಾಲಿನ ಉತ್ಪನ್ನಗಳು ಇಲ್ಲಿನ ಜನರಿಗೆ ಮುಖ್ಯ ಪೋಷಕ ಆಹಾರವಾಗಿದೆ. 

ನೀರಾವರಿ : ಹೆಚ್ಚು ಭಾಗ ಒಣ ಪ್ರದೇಶವನ್ನು ಹೊಂದಿರುವ ರಾಜಸ್ತಾನ ರಾಜ್ಯಕ್ಕೆ ಆಧುನಿಕ ನೀರಾವರಿ ಪದ್ಧತಿ ವರದಾನವಾಗಿ ಪರಿಣಮಿಸಿದೆ. ರಾಜ್ಯದ ಸಾಗುವಳಿ ಪ್ರದೇಶ ಶೇ. 15 ರಷ್ಟು ನೀರಾವರಿ ಸೌಲಭ್ಯ ಹೊಂದಿದೆ. ರಾಜಸ್ತಾನ ಮತ್ತು ಪಂಜಾಬ್ ರಾಜ್ಯಗಳು ಭಾಕ್ರಾನಂಗಲ್ ಯೋಜನೆಯ ನೀರನ್ನು ಬಳಸುತ್ತವೆ. ಚಂಬಲ್ ಕಣಿವೆ ಯೋಜನೆಯ ನೀರನ್ನು ಮಧ್ಯಪ್ರದೇಶದೊಂದಿಗೆ ಹಂಚಿಕೊಳ್ಳುತ್ತದೆ. ರಾಜಸ್ತಾನ ಕಾಲುವೆ ಯೋಜನೆ ರಾಜ್ಯದ ದೊಡ್ಡ ನೀರಾವರಿ ವ್ಯವಸ್ಥೆಯಾಗಿದೆ. ಹರ್ಯಾಣದ ಗುರ್‍ಗಾನ್ ಮತ್ತು ಉತ್ತರ ಪ್ರದೇಶದ ಆಗ್ರಾ ನಾಲೆಯಿಂದಲೂ ಇಲ್ಲಿಗೆ ನೀರಾವರಿ ಸೌಲಭ್ಯ ಒದಗುತ್ತದೆ. ಪಂಜಾಬ್‍ನ ನದಿಗಳಿಂದಲೇ ಇಲ್ಲಿಗೆ ಹೆಚ್ಚು ನೀರಾವರಿ ಸೌಲಭ್ಯ ಒದಗಿಸಿಕೊಳ್ಳಬೇಕಾಗಿದೆ. ಪೂರ್ಣ ಪ್ರಮಾಣದ ನೀರಾವರಿ ಸೌಲಭ್ಯ ಒದಗಿದಾಗ ರಾಜ್ಯದ ಒಟ್ಟು ಸಾಗುವಳಿ ಪ್ರದೇಶದ ಮೂರನೆಯ ಒಂದು ಭಾಗಕ್ಕೆ ನೀರು ಒದಗುತ್ತದೆ. ನಾಲೆ ನೀರಾವರಿ ಮಾಡಲು ಆಗದಿರುವ ಪ್ರದೇಶಗಳಿಗೆ ಬಾವಿಗಳು ಮತ್ತು ಕೆರೆಗಳು ಮುಖ್ಯ ನೀರಾವರಿ ಮೂಲವಾಗಿವೆ. 2003-04ರ ಸಾಲಿನಲ್ಲಿ 71,000 ಹೆಕ್ಟೇರ್‍ಗಳನ್ನು ನೀರಾವರಿಗೆ ಅಳವಡಿಸಿಕೊಳ್ಳುವುದರೊಂದಿಗೆ ರಾಜ್ಯದ ನೀರಾವರಿ ಪ್ರದೇಶ ಒಟ್ಟು 31.11 ಲಕ್ಷ ಹೆಕ್ಟೇರುಗಳಾಗಿವೆ.

ಕೈಗಾರಿಕೆ : ರಾಜಸ್ತಾನ ಪ್ರಾಚೀನ ಕಾಲದಿಂದಲೂ ಗುಡಿಗಾರಿಕೆಗೆ ಮತ್ತು ಕುಸರಿ ಕೆಲಸಗಳಿಗೆ ಹೆಸರಾದ ರಾಜ್ಯ. ಇಂದು ರಾಜ್ಯದಲ್ಲಿ 11,949 ಕೈಗಾರಿಕೆಗಳ ಘಟಕಗಳಿವೆ. ಉಣ್ಣೆ ಸಾಮಗ್ರಿಗಳ ತಯಾರಿಕೆ, ಸಕ್ಕರೆ, ಸಿಮೆಂಟ್, ಗಾಜು, ಸೋಡಿಯಮ್, ಆಕ್ಸಿಜನ್, ಅಸಿಟಲೀನ್, ಕ್ರಿಮಿನಾಶಕಗಳು ಮತ್ತು ಬಣ್ಣಗಳ ತಯಾರಿಕೆಯಲ್ಲಿ ದೊಡ್ಡ ಕೈಗಾರಿಕೆಗಳಿವೆ. ಕಾಸ್ಟಿಕ್ ಸೋಡ ಕ್ಯಾಲ್ಸಿಯಮ್ ಕಾರ್ಬೈಡ್, ರೇಯಾನ್ ಟೈರ್ ಕಾರ್ಡ್ ಮತ್ತು ತಾಮ್ರ ಹದಮಾಡುವ ಅನೇಕ ಘಟಕಗಳಿವೆ. ಒಟ್ಟು 1.70 ಲಕ್ಷ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳ ಕ್ಷೇತ್ರದಲ್ಲಿ 1423.33 ಕೋಟಿ ರೂಪಾಯಿಗಳ ಬಂಡವಾಳ ಹೂಡಲಾಗಿದೆ. ಈ ಕ್ಷೇತ್ರ ಸುಮಾರು 6.51 ಲಕ್ಷ ಜನರಿಗೆ ಉದ್ಯೋಗ ಒದಗಿಸಿದೆ. ದೆಹಲಿಯ ಸತುವನ್ನು ಕರಗಿಸುವ ಸ್ಥಾವರ, ಖೆತ್ರಿ ನಗರದ ತಾಮ್ರ ಕಾರ್ಖಾನೆ, ಕೊಟದ ಪ್ರಿಷಿಷನ್ ಉಪಕರಣಗಳ ಕಾರ್ಖಾನೆ- ಇವು ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಮುಖ ಕೈಗಾರಿಕಾ ಸ್ಥಾವರಗಳಾಗಿವೆ. 2003, ಡಿಸೆಂಬರ್‍ನಲ್ಲಿ ರಾಜ್ಯ ಕೈಗಾರಿಕಾ ಘಟಕಗಳಲ್ಲಿ 9.51 ಲಕ್ಷ ಮಂದಿಗೆ ಉದ್ಯೋಗ ದೊರಕಿತ್ತು.

ರಾಜಸ್ತಾನದ ಗುಡಿಗಾರಿಕೆ ವಸ್ತುಗಳು ಜಗತ್ತಿನಾದ್ಯಂತ ಪ್ರಸಿದ್ಧವಾಗಿವೆ. ಅವುಗಳಲ್ಲಿ ಅಮೃತಶಿಲೆ, ಉಣ್ಣೆ ಕಂಬಳಿ, ಆಭರಣ, ಹೆಣಿಗೆ ವಸ್ತುಗಳು, ಚರ್ಮದ ಸಾಮಗ್ರಿಗಳು, ಮಡಿಕೆ ಮತ್ತು ಹಿತ್ತಾಳೆ ಚಿತ್ತಾರ ಬಿಡಿಸುವುದು ಇವು ಪ್ರಮುಖವಾದವು. ಇವಲ್ಲದೇ ಪಾತ್ರೆಗಳು, ದಂತದ ಕುಸುರಿ ವಸ್ತುಗಳು, ಆಟಿಕೆಗಳು, ಗಾಜು, ಶ್ವೇತಶಿಲಾಮೂರ್ತಿಗಳು, ನಕ್ಕಿಬಟ್ಟೆ, ಬಾಂಧಸೀರೆ ಇವುಗಳ ತಯಾರಿಕೆ ಇವರಿಗೆ ಪಾರಂಪರಿಕವಾಗಿ ಬಂದವು. ಉಪ್ಪು ತಯಾರಿಕೆ ಇಲ್ಲಿನ ಕೆಲವು ಪ್ರದೇಶಗಳಲ್ಲಿ ಜೀವನಾಧಾರಿತ ಕಸುಬು.

ಸಾರಿಗೆಸಂಪರ್ಕ : ರಾಜಸ್ತಾನ ಭಾರತದ ಇತರ ರಾಜ್ಯಗಳೊಡನೆ ಹೋಲಿಸಿದರೆ ಕಡಿಮೆ ಜನಸಾಂದ್ರತೆಯುಳ್ಳದ್ದು. ಇಲ್ಲಿ ಪ್ರತಿಯೊಂದು ಚ. ಕಿ. ಮೀ. ಗೆ 129 ಜನ ವಾಸಿಸುತ್ತಾರೆ. ಇಲ್ಲಿನ ಸಾರಿಗೆ ಸಂಪರ್ಕದ ವಿಸ್ತರಣೆಗೆ ಅನಾನುಕೂಲವಾದ ಭೂಲಕ್ಷಣಗಳು ಅಡಚಣೆಗಳಾಗಿದ್ದರೂ ಅನೇಕ ಹೆದ್ದಾರಿಗಳು ರಾಜ್ಯಾದ್ಯಂತ ಕಂಡುಬರುತ್ತವೆ. ದೆಹಲಿ-ಜಯಪುರ-ಅಜ್ಮೀರ್-ಉದಯಪುರ-ಅಹಮದಾಬಾದ್- ಮುಂಬಯಿ ರಾಷ್ಟ್ರೀಯ ಹೆದ್ದಾರಿ 1428 ಕಿಮೀ ಉದ್ದವಿದೆ. ಆಗ್ರಾ-ಜಯಪುರ-ಬಿಕನೇರ್ ಮಾರ್ಗ 582 ಕಿಮೀ, ಜಬ್ಬಲ್‍ಪುರ-ಭೂಪಾಲ್-ಜಯಪುರ ಮಾರ್ಗ 890 ಕಿಮೀ, ಚಂಡಿಗಡ-ಕುಲು-ಮನಾಲಿ ಮಾರ್ಗ 323 ಕಿಮೀ ಉದ್ದವಿದೆ. ರಾಜ್ಯದಲ್ಲಿ ಒಟ್ಟು 11,949 ಕಿಮೀ ರಸ್ತೆಮಾರ್ಗವಿದೆ. ರಾಜ್ಯದ ಒಟ್ಟು ರಸ್ತೆ ಮಾರ್ಗಗಳ ಉದ್ದ 122,634 ಕಿಮೀ. ಇದರಲ್ಲಿ ಪಕ್ಕಾರಸ್ತೆಗಳ ಉದ್ದ 60,211 ಕಿಮೀ (1992). ಮಾರ್ಚ್ 2004ರಲ್ಲಿ ಒಟ್ಟು 1,58,240 ಕಿ.ಮೀ. ದೂರದ ರಸ್ತೆಗಳಿದ್ದವು.

ರಾಜ್ಯದಲ್ಲಿನ ಒಟ್ಟು ರೈಲು ಮಾರ್ಗಗಳ ಒಟ್ಟು ಉದ್ದ 6228ಕಿಮೀ, ಜೋದಪುರ, ಜಯಪುರ, ಉದಯಪುರ, ಬಿಕನೇರ್, ಕೊಟ, ಸವಾಯಿ ಮಾಧೋಪುರ್ ಮತ್ತು ಭರತ್‍ಪುರಗಳು ಮುಖ್ಯ ರೈಲ್ವೆ ನಿಲ್ದಾಣಗಳು. ಉತ್ತರ ಭಾರತದಿಂದ ಗುಜರಾತ್‍ಗೆ ಹೋಗುವ ರೈಲುಮಾರ್ಗ ರಾಜಸ್ತಾನದ ಮೂಲಕ ಹಾದುಹೋಗುತ್ತದೆ.

ಜಯಪುರ, ಉದಯಪುರ, ಜೋಧಪುರ ಮತ್ತು ಜಲ್‍ವಾರ್‍ಗಳಿಗೆ ಒಳನಾಡ ವಿಮಾನಯಾನ ನಿಲ್ದಾಣಗಳಿವೆ. 127 ಜನರಿಗೆ ಒಂದರಂತೆ ದೂರವಾಣಿ ಸೌಲಭ್ಯವಿದೆ. ಶೇಕಡ 79.4 ರಷ್ಟು ಗ್ರಾಮಗಳು ವಿದ್ಯುದೀಕರಣಗೊಂಡಿವೆ.

ಶಿಕ್ಷಣ : ರಾಜಸ್ತಾನದ ಜನರ ಭಾಷೆ ರಾಜಸ್ತಾನಿ ಮತ್ತು ಹಿಂದೀ. ಶಿಕ್ಷಣದಲ್ಲಿ ಸಾಮಾನ್ಯ ಪ್ರಗತಿ ಸಾಧಿಸಿದೆ. ಇದಕ್ಕೆ ಮುಖ್ಯ ಕಾರಣ ಆಗಾಗ ತಲೆದೋರುವ ಕ್ಷಾಮ ಹಾಗೂ ಇಲ್ಲಿನ ಗ್ರಾಮಗಳು ದೂರದೂರದಲ್ಲಿರುವುದೇ ಆಗಿದೆ. ಜನಸಾಮಾನ್ಯರ ಜೀವನ ಸ್ಥಿತಿ ತುಂಬ ಕಠಿಣವಾಗಿದೆ. ರಾಜ್ಯದ ಒಟ್ಟು ಸಾಕ್ಷರತೆ ಶೇ. 20.44 ರಷ್ಟು ಅಕ್ಷರಸ್ಥರಾಗಿದ್ದಾರೆ (1991). ರಾಜಸ್ತಾನ ವಿಶ್ವವಿದ್ಯಾಲಯ (ಜಯಪುರ), ಅಜ್ಮೀರ್ ವಿಶ್ವವಿದ್ಯಾನಿಲಯ (ಅಜ್ಮೀರ್), ಬನಸ್ಥಲೀ ವಿದ್ಯಾಪೀಠ (ಬನಸ್ಥಲೀ), ಬಿರ್ಲಾ ತಾಂತ್ರಿಕ ಮತ್ತು ವಿe್ಞÁನ ಸಂಸ್ಥೆ (ಪಿಲನಿ), ಜೋಧ್‍ಪುರ ವಿಶ್ವವಿದ್ಯಾಲಯ (ಜೋಧ್‍ಪುರ), ಕೊಟ ಮುಕ್ತ ವಿಶ್ವವಿದ್ಯಾಲಯ (ಕೊಟ), ವ್ಯವಸಾಯ ವಿಶ್ವವಿದ್ಯಾಲಯ (ಬಿಕನೇರ್), ರಾಜಸ್ತಾನ ವಿದ್ಯಾಪೀಠ (ಉದಯಪುರ) ಇವು ರಾಜ್ಯದ ಮುಖ್ಯ ವಿದ್ಯಾ ಸಂಸ್ಥೆಗಳು. ರಾಜಸ್ತಾನದಲ್ಲಿ ಅಕ್ಷರe್ಞÁನವನ್ನು ವಿಸ್ತರಿಸಲು ಸಕಲ ಪ್ರಯತ್ನಗಳು ನಡೆಯುತ್ತಿವೆ. ಇಡೀ ಉತ್ತರ ಭಾರತದಲ್ಲಿ ಅಜ್ಮೀರ್ ಜಿಲ್ಲೆ ಪ್ರಥಮಪೂರ್ಣ ಸಾಕ್ಷರತಾ ಜಿಲ್ಲೆಯಾಗಿದೆ.
ಆಡಳಿತ : ರಾಜಸ್ತಾನ ಭಾರತದ ರಾಜ್ಯಗಳಲ್ಲಿ ಒಂದಾದರೂ ಇದರಲ್ಲಿ ಇತರ ರಾಜ್ಯಗಳಲ್ಲಿ ಇರುವಂತೆ ದ್ವಿಸದನ ಪದ್ಧತಿ ಇಲ್ಲ. ಏಕಸದನ ಪದ್ಧತಿ ಇದೆ. ವಿಧಾನ ಸಭೆ ಇಲ್ಲಿನ ಶಾಸಕಾಂಗ. ರಾಜ್ಯದಲ್ಲಿ 32 ಜಿಲ್ಲೆಗಳೂ 87 ಉಪಜಿಲ್ಲೆಗಳೂ 211 ತಹಸಿಲ್‍ಗಳೂ ಇವೆ. ಜಿಲ್ಲಾಧಿಕಾರಿಗಳು ಜಿಲ್ಲೆಯ ಆಡಳಿತ ಮುಖ್ಯರು. ಉಚ್ಚ ನ್ಯಾಯಾಲಯ ಜೋಧ್‍ಪುರದಲ್ಲಿದ್ದು ಜಯಪುರದಲ್ಲಿ ಅದರ ಹೆಚ್ಚುವರಿ ಪೀಠವಿದೆ. ರಾಜಸ್ತಾನ ರಾಜ್ಯದ ಜಿಲ್ಲೆಗಳ ವಿವರ ಇಂತಿದೆ:

ಕ್ರ. ಸಂ.
ಜಿಲ್ಲೆ
ವಿಸ್ತೀರ್ಣ (ಚಕಿಮೀ)
ಜನಸಂಖ್ಯೆ (2001)
ಜಿಲ್ಲಾ ಆಡಳಿತ ಕೇಂದ್ರ

1
ಅಜ್ಮೀರ್
8481
2180526
ಅಜ್ಮೀರ್

2
ಆಳ್ವಾರ್ (ಅಲ್ವಾರ್)
8380
2990862
ಆಳ್ವಾರ್ (ಅಲ್ವಾರ್)

3
ಉದಯಪುರ
12511
263221
ಉದಯಪುರ

4
ಕೊಟ
5481
1568580
ಕೊಟ

5
ಗಂಗಾನಗರ್
7944
1788487
ಗಂಗಾನಗರ್

6
ಚಿತ್ತೋರ್‍ಗಢ (ಚಿತ್ತೂರು)
10856
1802656
ಚಿತ್ತೋರ್‍ಗಢ 

7
ಚುರು
16830
1922908
ಚುರು

8
ಜಯಪುರ 
11588
5252388
ಜಯಪುರ 

9
ಜûಲ್‍ವಾರ್
6219
1180342
ಜûಲ್‍ವಾರ್

10
ಜಲೊರ್
10640
1448486
ಜಲೊರ್

11
ಜûುನ್‍ಜುನು
5928
1913099
ಜûುನ್‍ಜುನು

12
ಜೈಸಲ್ಮೇರ್
28401
507999
ಜೈಸಲ್ಮೇರ್

13
ಜೋಧ್‍ಪುರ
22850
2880777
ಜೋಧ್‍ಪುರ

14
ಟೊಂಕ್
7194
1211343
ಟೊಂಕ್

15
ಡುಂಗರ್‍ಪುರ್
3770
1107037
ಡುಂಗರ್‍ಪುರ್

16
ದೌಸ
2950
1316790
ದೌಸ

17
ಧೋಲ್‍ಪುರ್
3034
982815
ಧೋಲ್‍ಪುರ್

18
ನಾಗೌರ್
17718
2773894
ನಾಗೌರ್

19
ಪಲಿ
12387
1819201
ಪಲಿ

20
ಬರನ್
6955
1022568
ಬರನ್

21
ಬನ್ಸ್‍ವಾರ
5037
1500420
ಬನ್ಸ್‍ವಾರ

22
ಬರ್ಮರ್
28387
1963758
ಬರ್ಮರ್

23
ಬಿಕನೇರ್
27244.
1673562
ಬಿಕನೇರ್

24
ಬುಂದಿ
5550
961269
ಬುಂದಿ

25
ಭರತ್‍ಪುರ್
5066
2098323
ಭರತ್‍ಪುರ್

26
ಭಿಲ್ವಾರ
10455
2009516
ಭಿಲ್ವಾರ

27
ರಾಜ್‍ಸಮಂಡ್
4768
986269
ರಾಜ್‍ಸಮಂಡ್

28
ಸವಾಯಿಮಾದೋಪುರ್
5043
1116031
ಸವಾಯಿಮಾದೋಪುರ್

29
ಸಿಕಾರ್
7732
2287229
ಸಿಕಾರ್

30
ಸಿರೊಹಿ
5136
850756
ಸಿರೊಹಿ

31
ಹನುಮಾನ್‍ಗರ್ ಹೊಸಜಿಲ್ಲೆ
12690
1517390
ಹನುಮಾನ್‍ಗರ್

32
ಕರೋಲಿ
5014
1205631
ಕರೋಲಿ

ಸಾಮಾಜಿಕ ಸ್ಥಿತಿಗತಿಗಳು : ಮಳೆಯ ಅಭಾವ ಮತ್ತು ನೀರಾವರಿ ಸೌಲಭ್ಯದ ಕೊರತೆಯಿಂದಾಗಿ ರಾಜ್ಯದ ಹೆಚ್ಚುಮಂದಿ ತಮ್ಮ ಮೂಲ ಜೀವನ ರೀತಿಯನ್ನು ಬದಲಾಯಿಸಿಕೊಳ್ಳಲಾಗಿಲ್ಲ. ಇದರಿಂದಾಗಿ ರಾಜಸ್ತಾನ ಭೂಬಳಕೆಯಲ್ಲೂ ಹಿಂದುಳಿದಿದೆ. ಜೊತೆಗೆ ಇವರ ಸಂಸ್ಕøತಿ ಮತ್ತು ಮೂಲ ಪದ್ಧತಿಗಳು ಹಾಗಿ ಉಳಿದುಕೊಂಡು ಬಂದಿದೆ. ಆಳ್ವಾರ್, ಜಯಪುರ, ಭರತ್‍ಪುರ್, ಧೋಲ್‍ಪುರ್ ಪ್ರದೇಶಗಳಲ್ಲಿ ಮಿನಾ, ಮೆವೊ ಮತ್ತು ಬಂಜಾರ ಬುಡಕಟ್ಟು ಜನರು ಕಂಡುಬರುತ್ತಾರೆ. ಇವರಲ್ಲಿ ವ್ಯಾಪಾರಿಗಳೂ ಕುಶಲ ಕಲೆಗಾರರೂ ಇದ್ದಾರೆ. ಸಂಚಾರಿ ಸಮೂಹಗಳಲ್ಲಿ ವ್ಯವಸಾಯ ಮತ್ತು ಗೃಹೋಪಯೋಗಿ ಉಪಕರಣಗಳನ್ನು ತಯಾರಿಸುವ ಮತ್ತು ದುರಸ್ತು ಮಾಡುವ ಗಡಿಯಾ ಲೋಹಾರ್‍ಗಳ ಗುಂಪೊಂದು ಇದೆ. ಭಾರತದ ಪ್ರಾಚೀನ ಪಂಗಡಗಳಲ್ಲಿ ಒಂದಾದ ಭಿಲ್ಲರು ದುಗರ್‍ಪುರ್, ಬನ್ಸ್‍ವಾರ, ಪ್ರತಾಪ್‍ಗರ್, ಮೇವಾರ್ ಮತ್ತು ಸಿರೊಹಿ ಭಾಗಗಳಲ್ಲಿ ನೆಲಸಿದ್ದಾರೆ. ಈ ಭಿಲ್ಲರು ಚಿಕ್ಕ ಆಕೃತಿ, ಕಪ್ಪುವರ್ಣ ಮತ್ತು ಅಗಲವಾದ ಮೂಗಿನಿಂದ ಕೂಡಿದವರಾಗಿದ್ದು ಬಿಲ್ಲುಗಾರಿಕೆಯಲ್ಲಿ ನಿಪುಣರು. ಗ್ರಾಗಿಯರು ಮತ್ತು ಕಥೊಡಿಗಳು ಮೇವಾರ್ ಬೆಟ್ಟಗಳಲ್ಲಿ ವಾಸಿಸುತ್ತಾರೆ. ಗ್ರಾಗಿಯರು ನೀಳಕಾಯರೂ ಸುಂದರರೂಪವುಳ್ಳವರೂ ಆಗಿದ್ದು ನಿಷ್ಠೆ ಮತ್ತು ಸ್ನೇಹಕ್ಕೆ ಹೆಸರಾದವರು. ಕಥೊಡಿಗಳು ಅಲೆಮಾರಿಗಳು, ಸಹರಿಯ ಎಂಬ ಸಮೂಹ ಕೂಟವು ಇಲ್ಲಿ ಕಂಡುಬರುತ್ತದೆ. ಮಾರವಾರದ ರೆಬರಿಗಳು, ದನಗಾಹಿಗಳು ನೀರಿನ ಅಭಾವಕಂಡಾಗ ಅಲ್ಲಿನ ಬಹುಭಾಗ ಜಾನುವಾರಗಳನ್ನು ಕುರಿ ಮೇಕೆಗಳನ್ನು ಚಂಬಲ್ ನದಿ ಕಣಿವೆಗೆ ಸಾಗಿಸುತ್ತಾರೆ. ಕೆಲವರು ರಾಜಸ್ತಾನದ ಕಾಲುವೆ ಪ್ರದೇಶಕ್ಕೆ ಮತ್ತು ಗಂಗಾನದಿ ಬಯಲಿನವರೆಗೂ ತಮ್ಮ ಹಿಂಡುಗಳನ್ನು ಅಟ್ಟಿತರುತ್ತಾರೆ. ರಜಪೂತ ಜನಾಂಗದಿಂದಾಗಿ ರಾಜ್ಯಕ್ಕೆ ರಾಜಸ್ತಾನ ಎಂಬ ಹೆಸರು ಬಂದಿದೆ. ಇವರು ಅಗ್ನಿ ಪುತ್ರರೆಂದು ಪೌರಾಣಿಕ ಕಥೆಗಳು ತಿಳಿಸುತ್ತದೆ. ಯುದ್ಧೋತ್ಸಾಹಕ್ಕೆ ಮತ್ತು ಸಾಹಸ ಕಾರ್ಯಗಳಿಗೆ ಹೆಸರಾದವರು. ಈಗ ಹೆಚ್ಚಿನ ಜನ ವ್ಯವಸಾಯ ಮತ್ತು ಕೈಗಾರಿಕೆಗಳಲ್ಲಿ ನಿರತರಾಗಿದ್ದಾರೆ. ರಾಜ್ಯದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಜಾಟರು ಮತ್ತು ಗುರ್ಜರರು ದೊಡ್ಡ ವ್ಯಾವಸಾಯಿಕ ಸಮೂಹಗಳಾಗಿವೆ.

	ಹಿಂದೂಧರ್ಮ ಇಲ್ಲಿನ ಬಹುಸಂಖ್ಯಾತ ಜನರ ಧರ್ಮವಾಗಿದೆ. ಶಿವ, ಶಕ್ತಿ, ವಿಷ್ಣು ಮತ್ತು ಇತರ ದೇವತೆಗಳನ್ನು ಪೂಜಿಸುತ್ತಾರೆ. ವರ್ತಕ ಸಮಾಜ ಮತ್ತು ಇತರ ಶ್ರೀಮಂತ ವರ್ಗಗಳಲ್ಲಿ ಜೈನಧರ್ಮದ ಅನುಯಾಯಿಗಳಿದ್ದಾರೆ. ಮಹಾವೀರಜಿ, ರಣ್‍ಕಪೂರ್, ದುಲೈ ಮತ್ತು ಕರೇರಗಳು ಮುಖ್ಯ ಜೈನಕೇಂದ್ರಗಳಾಗಿವೆ. ಕೆಲವೆಡೆ ದಾದೂನ (1603) ಅನುಯಾಯತಿಗಳಾದ ದಾದೂ ಪಂಥೀಯರಿದ್ದಾರೆ. ಇವರು ಎಲ್ಲರನ್ನು ಸಮನಾಗಿ ಕಾಣುವ ಸಸ್ಯಾಹಾರಿಗಳು. ಮಾದಕವಸ್ತುಗಳನ್ನು ಸೇವಿಸುವುದಿಲ್ಲ. ಆಜನ್ಮ ಬ್ರಹ್ಮಚರ್ಯೆ ಆಚರಿಸುತ್ತಾರೆ.

	ಹನ್ನೆರಡನೆಯ ಶತಮಾನದಿಂದ ರಾಜ್ಯದಲ್ಲಿ ಇಸ್ಲಾಂ ಧರ್ಮ ಹರಡಿದೆ. ಅಜ್ಮೀರ್ ಮುಸ್ಲಿಂ ಧರ್ಮಗುರುಗಳ ಕೇಂದ್ರವಾಗಿತ್ತು. ಹಿಂದೆ ಅನೇಕ ಕಡೆಗಳಲ್ಲಿ ಮುಸ್ಲಿಂ ಅಧಿಕಾರಿಗಳು, ಸಾಮಂತರು ಇದ್ದು ಈಗ ಮುಸ್ಲಿಮರು ವಿವಿಧ ಪಟ್ಟಣಗಳಲ್ಲಿ ನೆಲಸಿದ್ದಾರೆ. ವ್ಯಾಪಾರದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಇವರಲ್ಲಿ ಕೆಲವು ವೃತ್ತಿಗಾಯಕರಿದ್ದಾರೆ.

	ರಾಜಸ್ತಾನ ಗ್ರಾಮೀಣ ಸಂಸ್ಕøತಿಯ ತವರಾಗಿದೆ. ಬಹುತೇಕ ಮನೆಗಳು ಹುಲ್ಲಿನ ಚಾವಣಿಗಳನ್ನು ಹೊಂದಿದ ಮಣ್ಣಿನಿಂದ ಕಟ್ಟಲಾದ ಮನೆಗಳು. ಸಾಮಾನ್ಯವಾಗಿ ಅವುಗಳಿಗೆ ಒಂದೇ ಬಾಗಿಲು ಇದ್ದು ಕಿಟಕಿ ಮತ್ತು ಗವಾಕ್ಷಿ ಇರುವುದಿಲ್ಲ. ಇದಕ್ಕೆ ಬಹುಶಃ ಇಲ್ಲಿನ ಹವೆ, ಬಡತನ ಮತ್ತು ರಕ್ಷಣೆಯ ಕಾರಣಗಳು ಪ್ರೇರಕವಾಗಿರಬಹುದು. ಅನುಕೂಲಸ್ಥ ರೈತರ ಮನೆಗಳಲ್ಲು ಒಂದಕ್ಕಿಂತ ಹೆಚ್ಚು ಕೊಠಡಿಗಳಿರುತ್ತವೆ. ಅವುಗಳಿಗೆ ಹೆಂಚುಗಳನ್ನು ಹೊದಿಸಿದ್ದು ಮುಂಚಾವಣಿ ಮತ್ತು ಹಿತ್ತಿಲುಗಳಿರುತ್ತವೆ. ರಾಜ್ಯದಲ್ಲಿ 32.000ಕ್ಕೂ ಹೆಚ್ಚು ಗ್ರಾಮಗಳಿದ್ದು ಹೆಚ್ಚಿನ ಜನಸಂಖ್ಯೆ ಫಲವತ್ತಾದ ಕರಾವಳಿಗಳ ಪೂರ್ವಭಾಗದಲ್ಲಿ ಕಂಡುಬರುತ್ತದೆ. ಮದುವೆ, ಹಬ್ಬ ಹರಿದಿನಗಳನ್ನು ಸಾಂಪ್ರದಾಯಿಕವಾಗಿ ಆಚರಿಸುವುದೆಂದರೆ ಇಲ್ಲಿನ ಜನರಿಗೆ ಎಲ್ಲಿಲ್ಲದ ಉತ್ಸಾಹ, ಮಹಿಳೆಯರು, ಪುರುಷರು ನಿರ್ದಿಷ್ಟ ಸಂದರ್ಭಗಳಲ್ಲಿ ಹಾಡು ಕುಣಿತಗಳನ್ನು ಸಾಮೂಹಿಕವಾಗಿ ಆಚರಿಸುತ್ತಾರೆ. ಲಂಗ ಎಂಬ ದನಗಾಹಿ ಪಂಗಡದವರು ಸಂಗೀತದ ಉಪಕರಣಗಳಿಂದ ವಿವಿಧ ನಾದಗಳನ್ನು ಹೊಮ್ಮಿಸುವುದರಲ್ಲಿ ಪರಿಣಿತರು. ಜನರು ರಾಜರ ಸಾಹಸ ಮತ್ತು ಪ್ರೇಮಕಥೆಗಳನ್ನು ಜನಪದ ಕಥೆ ಮತ್ತು ಹಾಡಿನ ರೂಪದಲ್ಲಿ ಹಾಡುತ್ತಾರೆ. ಓಕಳಿ ಹಬ್ಬ ಇಲ್ಲಿ ಜನಪ್ರಿಯ.

	ಇತಿಹಾಸ : ರಾಜಸ್ತಾನ ಪ್ರಾಚೀನ ಸಂಸ್ಕøತಿ ಮತ್ತು ನಾಗರಿಕತೆಗಳ ನಾಡು. ಬನಾಸ್ ನದಿಯ ಬಯಲಿನಲ್ಲಿ ಒಂದು ಲಕ್ಷ ವರ್ಷಗಳ ಹಿಂದಿನ ಪ್ರಾಚೀನ ಮಾನವನ ನೆಲೆಗಳು ಕಂಡುಬಂದಿವೆ. ಸಿಂಧೂ ಬಯಲಿನ ಸಂಸ್ಕøತಿಯ ಅವಶೇಷಗಳು ಕಲಿಬಂಗನ್, ಆಹಾರ್ ಮತ್ತು ಗಿಲುಂದ್ ಮತ್ತಿತರ ಕಡೆಗಳಲ್ಲಿ ದೊರೆತಿವೆ. ಕಲಿಬಂಗನ್‍ನಲ್ಲಿ ದೊರೆತಿರುವ ಮಡಕೆ ಚೂರುಗಳ ಕಾಲ ಕ್ರಿ.ಪೂ. 2700 ವರ್ಷಕ್ಕಿಂತಲೂ ಹಿಂದಿನದೆಂದು ತಿಳಿದುಬಂದಿದೆ. ಭೈರಾತ್‍ನ ಬಳಿ ಅಶೋಕನ ಎರಡು ಬಂಡೆ ಶಾಸನಗಳು ಸಿಕ್ಕಿವೆ. ಇದರಿಂದ ಮೌರ್ಯಸಾಮ್ರಾಜ್ಯದ ಒಂದು ಭಾಗವಾಗಿ ರಾಜಸ್ತಾನ ಇದ್ದಿರಬಹುದೆಂದು ತಿಳಿದುಬರುತ್ತದೆ. 

	ಕ್ರಿ.ಪೂ. ಎರಡನೆಯ ಶತಮಾನದಲ್ಲಿ ಬ್ಯಾಕ್ಟ್ರಿಯಾ ಗ್ರೀಕರು ಈ ರಾಜ್ಯದ ವಿವಿಧ ಭಾಗಗಳನ್ನು ಆಕ್ರಮಿಸಿಕೊಂಡಿದ್ದಕ್ಕೆ ನಾಣ್ಯಗಳು ಮತ್ತು ಸಾಹಿತ್ಯಕ ಆಧಾರಗಳು ದೊರೆತಿವೆ. ಅಪೊಲೊಡೊಟಸ್ ಮತ್ತು ಮಿನಾಂಡರನ ಕಾಲದ ನಾಣ್ಯಗಳು ಉದಯಪುರದಲ್ಲಿ ಪತ್ತೆಯಾಗಿವೆ. ಶಕರು ಅಥವಾ ಸಿಥಿಯನ್ನರು ಕ್ರಿ.ಶ. ಎರಡನೆಯ ಶತಮಾನದಿಂದ ನಾಲ್ಕನೆಯ ಶತಮಾನದವರೆಗೂ ಇಲ್ಲಿ ಪ್ರಬಲರಾಗಿದ್ದರು. ಪ್ರಸಿದ್ಧ ರಾಜ ರುದ್ರದಾಮನ್ನನ ಗಿರಿನಾರ್ ಶಾಸನದಲ್ಲಿ ಅವನು ಮಾರು ಅಥವಾ ಮಾರವಾರದ ರಾಜನೆಂದು ಉಲ್ಲೇಖಿಸಲಾಗಿದೆ. ಮಗಧದ ಗುಪ್ತರು ಈ ರಾಜ್ಯದ ಬಹುಭಾಗವನ್ನು ನಾಲ್ಕನೆಯ ಶತಮಾನದ ಕೊನೆಯ ಕಾಲದಿಂದ ಆರನೆಯ ಶತಮಾನದ ಪ್ರಾರಂಭದವರೆಗೂ ಆಳಿದರು.

	ಆರು ಮತ್ತು ಏಳನೆಯ ಶತಮಾನದಿಂದ ರಜಪೂತ ದೊರೆಗಳು ರಾಜಸ್ತಾನ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಪ್ರಾಬಲ್ಯಕ್ಕೆ ಬಂದರು. ಚಕ್ರವರ್ತಿ ಹರ್ಷವರ್ಧನ ಉತ್ತರದಲ್ಲಿ ಕಟ್ಟಿದ ವಿಸ್ತಾರ ಸಾಮ್ರಾಜ್ಯದಲ್ಲಿ ರಾಜಸ್ತಾನದ ಬಹುಭಾಗ ಸೇರಿದ್ದಿತು. ಏಳನೆಯ ಶತಮಾನದಿಂದ ಹನ್ನೊಂದನೆಯ ಶತಮಾನದವರೆಗೂ ಗುಜರಾತ್ ಮತ್ತು ಮಧ್ಯಭಾರತದ ಅನೇಕ ರಜಪೂತರ ಮನೆತನಗಳು ರಾಜಸ್ತಾನದ ವಿವಿಧ ಸ್ಥಳಗಳಲ್ಲಿ ರಾಜ್ಯಗಳನ್ನು ಕಟ್ಟಿ ಆಳಿದವು. ಅವರಲ್ಲಿ ಸಿಸೋದಿಯರು, ಪರಿಹಾರರು, ಚೌಹಾನರು, ಚಾಟ್‍ಗಳು, ಪರಮಾರರು, ಸೊಲಂಕಿಗಳು, ಜಡೊನರು ಮತ್ತು ರಾಥೋಡರು ಪ್ರಮುಖರು. ಈ ಅವಧಿಯಲ್ಲಿ ಚಿತ್ತೋರ್‍ಗಢ, ಮೇವಾರ, ನಿರೊಹಿ, ಬುಂದಿ, ಕೊಟ, ಕಕಾಲಿ, ಜಯಪುರ, ಉದಯಪುರ, ಸಬಾರ್, ಜೈಸಲ್ಮೇರ್, ಜೋಧ್‍ಪುರ್, ಅಜ್ಮೀರ್, ಆಳ್ವಾರ್, ಧೋಲ್‍ಪುರ್ ಮೊದಲಾದ ಸ್ಥಳಗಳಲ್ಲಿ ಕೋಟೆಕೊತ್ತಲುಗಳು ನಿರ್ಮಾಣವಾದವು. ಪ್ರತೀಹಾರರು ಸಿಂಧ್ ಕಡೆಯಿಂದ ಆಕ್ರಮಣ ನಡೆಸುತ್ತಿದ್ದ ಅರಬ್ಬರನ್ನು ತಡೆದರು.

	ಮಹಮ್ಮದೀಯ ಧಾಳಿಕಾರರು ಭಾರತ ಉಪಖಂಡವನ್ನು ಪ್ರವೇಶಿಸಿದಾಗ ಲಾಹೋರ್, ದೆಹಲಿ ಮತ್ತು ಕನೌಜ್‍ಗಳಲ್ಲಿ ರಜಪೂತ ರಾಜರು ಆಳ್ವಿಕೆ ನಡೆಸುತ್ತಿದ್ದರು. ಮಹಮ್ಮದ್ ಘೋರಿ ಪೃಥ್ವಿರಾಜ್ ಚೌಹಾನನನ್ನು ಸೋಲಿಸಿ 1193ರಲ್ಲಿ ದೆಹಲಿಯನ್ನು ವಶಪಡಿಸಿಕೊಂಡ. ಅಲ್ಲಿಂದ ಮುಂದೆ ತಮ್ಮ ತಮ್ಮಲ್ಲೇ ಕಿತ್ತಾಡುತ್ತಿದ್ದ ರಜಪೂತರು ಹೊಸ ಅಪಾಯವನ್ನು ಎದುರಿಸಬೇಕಾಯಿತು. ಅದೇ ವರ್ಷ ಅಜ್ಮೀರ್ ಘೋರಿಯ ವಶವಾಯಿತು. ಮುಂದಿನ ಮೂರು ಶತಮಾನಗಳ ಕಾಲ ರಜಪೂತರಾಜರುಗಳು ಒಂದಲ್ಲ ಒಂದು ರೀತಿಯಲ್ಲಿ ದೆಹಲಿಯ ಸುಲ್ತಾನರೊಂದಿಗೆ ಹೋರಾಡಬೇಕಾಯಿತು. 

	ಅಲ್ಲಾವುದ್ದೀನ್ ಖಿಲ್ಜಿ ಗುಜರಾತಿನ ರಜಪೂತ ರಾಜರುಗಳನ್ನು ಸೋಲಿಸಿ ಕೆಲವರನ್ನು ಪದಚ್ಯುತಗೊಳಿಸಿದ್ದಲ್ಲದೆ ರಜಪುತಾನದ ಪ್ರಸಿದ್ಧ ಶಶೋದಿಗಳ ರಾಜಧಾನಿ ಚಿತ್ತೂರನ್ನು ವಶಪಡಿಸಿಕೊಂಡ. ಆದರೂ ರಜಪುತಾನದ ಕಠಿಣ ಭೌಗೋಳಿಕ ಪರಿಸರದಿಂದಾಗಿ ಮತ್ತು ರಜಪೂತರ ಅವಿರತ ವಿರೋಧದಿಂದಾಗಿ ದೆಹಲಿಯ ಸುಲ್ತಾನ್‍ಶಾಹಿ ಇಲ್ಲಿ ಸ್ಥಿರವಾಗಿ ತಮ್ಮ ಆಳ್ವಿಕೆಯನ್ನು ಹೇರಲಾಗಲಿಲ್ಲ. ಬಹುಬೇಗ ರಜಪೂತರು ಚಿತ್ತೂರನ್ನು ಮತ್ತೆ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು. ತುಘಲಕ್ ಮನೆತನದ ಅಳಿವಿನ ಅನಂತರ ಮಾಳದ ಮತ್ತು ಗುಜರಾತ್‍ಗಳಲ್ಲಿ ಸ್ಥಾಪಿತವಾದ ಎರಡು ಸ್ವತಂತ್ರ ಮುಸ್ಲಿಂ ರಾಜ್ಯಗಳು ರಜಪುತಾನಕ್ಕೆ ಮಾರಕಪ್ರಾಯವಾದವು. ಅವುಗಳನ್ನು ಎದುರಿಸಿಯೂ ರಜಪೂತ ರಾಜ್ಯಗಳು ಉಳಿದುಕೊಂಡವು.

	16ನೆಯ ಶತಮಾನದ ಪ್ರಾರಂಭದಲ್ಲಿ ರಜಪೂತರು ತಮ್ಮ ಪುನಶ್ಚೇತನಕ್ಕೆ ಒಳ್ಳೆಯ ಅವಕಾಶವನ್ನು ಕಂಡುಕೊಂಡರು. ಮಾಳವ ಮತ್ತು ಗುಜರಾತ್‍ಗಳು ಪರಸ್ಪರ ಯುದ್ಧಗಳಲ್ಲಿ ನಿರತವಾಗಿದ್ದವು. ದೆಹಲಿಯ ಕೇಂದ್ರ ಆಡಳಿತ ಶಿಥಿಲವಾಗತೊಡಗಿತು. ಈ ಸಂದರ್ಭದಲ್ಲಿ ಮೇವಾರದ ಸಿಸೋದಿಗಳ ರಾಣಾ ಪ್ರತಾಪಸಿಂಹ ತನ್ನ ರಾಜ್ಯವನ್ನು ವಿಸ್ತರಿಸಿದ. ಚಾಂದೇರಿಯ ಮೇದಿನಿರಾಯನ ಬೆಂಬಲದೊಂದಿಗೆ ಇವನು ಮಾಳ್ವ ಮತ್ತು ಗುಜರಾತ್‍ಗಳ ಸುಲ್ತಾನರೊಂದಿಗೆ ಕಾದಾಡಿ ಕೆಲವು ಯಶಸ್ಸುಗಳನ್ನು ಪಡೆದ. 1519ರಲ್ಲಿ ಈತ ಎರಡನೆಯ ಮಹಮ್ಮದನನ್ನು ಬಂಧಿಸಿದ್ದಲ್ಲದೆ 1526ರಲ್ಲಿ ಗುಜರಾತಿನೊಂದಿಗೆ ಮೈತ್ರಿ ಹೊಂದಿ ಮಾಳವ ರಾಜ್ಯವನ್ನು ಅಧೀನಪಡಿಸಿಕೊಂಡ. ರಣಥಂಬೋರ್ ಮತ್ತು ಖಾಂದಾರ್‍ಗಳೂ ಸೇರಿದಂತೆ ಮಾಳವಾದ ಅನೇಕ ಪ್ರದೇಶಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಆದರೆ ಇದೇ ಸಮಯಕ್ಕೆ ಮೊಗಲ್ ಸಾಮ್ರಾಜ್ಯ ಸ್ಥಾಪಕ ಬಾಬರ್ ಭಾರತದತ್ತ ದಂಡೆತ್ತಿ ಬರುತ್ತಿದ್ದದರಿಂದ ರಾಣಾನ ಗೆಲವು ಅಲ್ಪಕಾಲಿಕವಾಯಿತು. 1527ರಲ್ಲಿ ಭರತಪುರದ ಖಾನ್ವದಲ್ಲಿ ನಡೆದ ಭೀಕರಯುದ್ಧದಲ್ಲಿ ಬಾಬರನು ಪ್ರತಾಪಸಿಂಹನನನ್ನು ಸೋಲಿಸಿದ್ದಲ್ಲದೆ ಅನೇಕ ಪ್ರಮುಖ ರಜಪೂತ ನಾಯಕ ಸಾವಿಗೆ ಕಾರಣನಾದ. ಅದೇ ವರ್ಷ ರಾಣಾ ಪ್ರತಾಪಸಿಂಹ ಮರಣ ಹೊಂದಿದ. 1534ರಲ್ಲಿ ಗುಜರಾತಿನ ಬಹಾದ್ದೂರ್ ಷಾ ಚಿತ್ತೂರನ್ನು ವಶಪಡಿಸಿಕೊಂಡ.

	ಬಾಬರನ ಮರಣಾನಂತರ ಜೋಧ್‍ಪುರದ ರಾಥೋಡರ ನಾಯಕ ಮಾಲ್ದೇವ ಪ್ರಬಲನಾದ. 1544ರಲ್ಲಿ ಹುಮಾಯೂನನನ್ನೂ ಸೋಲಿಸಿ ದೆಹಲಿಯ ಅಧಿಪತಿಯಾಗಿದ್ದ ಸಾಹಸಿ ಷೇರ್‍ಷಾ ದೊಡ್ಡ ಸೈನ್ಯದೊಂದಿಗೆ ರಾಥೋಡರನ್ನು ಎದುರಿಸಲು ದಂಡೆತ್ತಿ ಹೋದ. ಅಜ್ಮೀರದ ಬಳಿ ನಡೆದ ಘೋರಹೋರಾಟದ ಅನಂತರ ಷೇರ್‍ಷಾ ಅಲ್ಲಿಂದ ಕಾಲ್ತೆಗೆದು ಮೇವಾರದ ಮೂಲಕ ಬುಂದೇಲ್‍ಖಂಡವನ್ನು ಪ್ರವೇಶಿಸಿ ಕಾಲಿಂಜರ್ ಕೋಟೆಯ ಎದುರಿಗೆ ಹತ್ಯೆಗೊಳಗಾದ.

	ಅಕ್ಬರ್ ರಾಜನಾಗಿ ಸಿಂಹಾಸನವೇರಿದ ಮೇಲೆ ರಜಪುತಾನದ ಇತಿಹಾಸವೇ ಭಿನ್ನ ದಾರಿ ತುಳಿಯಿತು. ಅಕ್ಬರ್ ದೃಢ ನಿರ್ಧಾರ ಮಾಡಿದವನಾಗಿ ಭಾರಿ ಸೈನ್ಯದೊಂದಿಗೆ ಅಸಂಘಟಿತರಾಗಿದ್ದ ರಜಪುತಾನರ ರಾಜರುಗಳ ಮೇಲೆ ಆಕ್ರಮಣ ಎಸಗಿದ ಮತ್ತು ಅವರ ಕೋಟೆಗಳನ್ನು ವಶಪಡಿಸಿಕೊಂಡ. ಅಜ್ಮೀರ್, ಚಿತ್ತೋರ್, ಗಢ, ಉದಯಪುರ, ಅಂಬರ್, ರಣಥಂಬೂರ್ ಮೊದಲಾದ ಪ್ರಮುಖ ಸ್ಥಳಗಳು ಇವನ ವಶವಾದವು. ಸಿಸೋದಿ ಅರಸರು ಶರಣಾಗದ ಗೆರಿಲ್ಲಾ ಯುದ್ಧವನ್ನು ಮುಂದುವರಿಸಿದರೂ ತಮ್ಮ ಸ್ವಾಧೀನದ ಬಹುಪ್ರದೇಶಗಳನ್ನು ಕಳೆದುಕೊಂಡರು. ಅಕ್ಬರ್ ಹೊಸ ರಾಜಕೀಯ ನೀತಿ ಅನುಸರಿಸಿದ. ತಾನೂ ರಜಪೂತ ಹೆಣ್ಣು ಮಕ್ಕಳನ್ನು ವಿವಾಹವಾದುದಲ್ಲದೆ ಶರಣಾಗತರಾದ ರಜಪೂತರನ್ನು ಸಾಮ್ರಾಜ್ಯದ ಸೇವೆಗೆ ಬಳಸಿಕೊಂಡು ಅವರವರ ರಾಜ್ಯಗಳನ್ನು ಅವರವರಿಗೆ ಹಿಂದಿರುಗಿಸಿದ. ಅವರಿಗೆ ರಾಜಧಾನಿಯಲ್ಲಿ ಮತ್ತು ಸೈನ್ಯದಲ್ಲಿ ಉನ್ನತ ಸ್ಥಾನಗಳನ್ನು ಕೊಟ್ಟ. ಇದರಿಂದ ಮೊಗಲರ ಮತ್ತು ರಜಪೂತರ ಸಂಬಂಧಗಳಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು. ಸಿಸೋದಿಗಳನ್ನು ಬಿಟ್ಟರೆ ಉಳಿದ ರಜಪೂತರು ಮೊಗಲರ ಅನುಯಾಯಿಗಳಾದರು.

	ಜಹಾಂಗೀರ್ 1614ರಲ್ಲಿ ಉದಯಪುರದ ರಾಣಾ ಅಮರಸಿಂಹನನ್ನು ಸಂಪೂರ್ಣವಾಗಿ ಸೋಲಿಸುವ ಮೂಲಕ ಸಿಸೋದಿಗಳ ವಿರೋಧವನ್ನು ತಡೆಗಟ್ಟಿದ. ಮುಂದೆ ಅವರೂ ಸಾಮ್ರಾಜ್ಯಕ್ಕೆ ನೆರವಾಗತೊಡಗಿದರು. ಜಹಾಂಗೀರ್ ಮತ್ತು ಷಾಜಹಾನರಿಬ್ಬರೂ ರಜಪೂತ ತಾಯಂದಿರ ಮಕ್ಕಳು, ಷಾಜಹಾನನು ಕೆಲವು ಕಾಲ ಉದಯಪುರದಲ್ಲಿ ಉತ್ತರಾಧಿಕಾರ ವಿವಾದ ಸಂಬಂಧದಲ್ಲಿ ಆಶ್ರಯ ಪಡೆದಿದ್ದ. ಮೊಗಲರು ಹಿಂದೂಗಳ ಬಗ್ಗೆ ಮೃದುವಾಗಿ ವರ್ತಿಸಲು ಅವರು ಮಾಡಿಕೊಂಡ ರಜಪೂತ ಮನೆತನದೊಂದಿಗಿನ ವಿವಾಹಗಳೂ ಕಾರಣ. ಷಾಜಹಾನನ ಉತ್ತರಾಧಿಕಾರತ್ವಕ್ಕಾಗಿ ಅಂತರಯುದ್ಧದಲ್ಲಿ ರಜಪೂತರಲ್ಲಿ ಬಹುತೇಕ ಮಂದಿ ದಾರಾನ ಪಕ್ಷವಹಿಸಿದ್ದರಿಂದ ಅವರು ಅದರಲ್ಲಿ ಯಶಸ್ವಿಯಾಗಿ ಹೊರಬಂದ ಔರಂಗಜೇಬನ ವಿರೋಧ ಕಟ್ಟಿಕೊಳ್ಳಬೇಕಾಯಿತು. ಔರಂಗಜೇಬನ ಬಳಿಯೂ ಹಲವಾರು ರಜಪೂತ ದಂಡನಾಯಕರು ಸೇವೆಸಲ್ಲಿಸಿದರು. ಆದರೆ ಔರಂಗಜೇಬ್ ಮತಾಂಧನಾಗಿ ಅವರ ಬಗ್ಗೆ ಸಂಶಯಗ್ರಸ್ಥನಾದಾಗ ಅವರಲ್ಲಿ ಅನೇಕರು ಅವನಿಂದ ದೂರಸರಿದರು. ಔರಂಗಜೇಬನ ಕೊನೆಗಾಲದ ಹೊತ್ತಿಗೆ ಮತ್ತೆ ಕೆಲವು ರಜಪೂತ ರಾಜರು ಸ್ವತಂತ್ರರಾಗುವ ಪ್ರಯತ್ನ ನಡೆಸಿದರು. ಅವನ ಮರಣಾನಂತರ ತಮ್ಮ ರಕ್ಷಣೆಗಾಗಿ ಸಿಸೋದಿಯ, ರಾಥೋಡ್ ಮತ್ತು ಕಚ್‍ವಾಡ ರಾಜರುಗಳು ಒಂದು ಒಕ್ಕೂಟವನ್ನು ರಚಿಸಿಕೊಂಡರು. ಜೋಧ್‍ಪುರ್ ಮತ್ತು ಜಯಪುರದ ರಾಜರು ಪ್ರಬಲರಾದರು. ಜಾಟರೊ ಸಂಘಟಿತರಾಗಿ ಭರತಪುರದಲ್ಲಿ ರಾಜ್ಯ ಸ್ಥಾಪಿಸಿದರು.

	ಮರಾಠರು ಪ್ರಬಲರಾಗಿ ಮೊಗಲ ಸಾಮ್ರಾಜ್ಯದ ಅನೇಕ ಭಾಗಗಳ ಮೇಲೆ ಅಧಿಪತ್ಯ ಸ್ಥಾಪಿಸಿದಾಗ ರಾಜಾಸ್ತಾನವೂ ಅದರಿಂದ ಹೊರತಾಗಲಿಲ್ಲ. 1756ರ ಹೊತ್ತಿಗೆ ಅಜ್ಮೀರ್ ಮರಾಠರ ವಶವಾಯಿತು. ಕ್ರಮೇಣ ಮರಾಠರು ರಜಪುತಾನದ ರಾಜರುಗಳಿಂದ ಪೊಗದಿ ವಸೂಲು ಮಾಡತೊಡಗಿದರು; ಜನರಿಂದ ತೆರಿಗೆ ಸಂಗ್ರಹಿಸಿದರು. ಇಡೀ ರಾಜ್ಯ ಅರಾಜಕತೆಗೆ ತುತ್ತಾಯಿತು. ಸುಮರು ಒಂದು ಶತಮಾನಕಾಲ ಈ ಸ್ಥಿತಿ ಮುಂದುವರಿಯಿತು. ಮರಾಠರು ಮತ್ತು ಅಮೀರ್‍ಖಾನನ ನೇತೃತ್ವದಲ್ಲಿ ಪಿಂಡಾರಿಗಳು ದೇಶವನ್ನು ಕೊಳ್ಳೆಹೊಡೆಯ ತೊಡಗಿದರು. ಪರಸ್ಪರ ಪ್ರತಿಷ್ಠೆ ಮತ್ತು ಆಂತರಿಕ ಕಲಹಗಳಿಂದ ದುರ್ಬಲರಾಗಿದ್ದ ರಜಪೂತರು ನಿಸ್ಸಾಹಾಯಕರಾಗಿದ್ದರು. ಬ್ರಿಟಿಷರು ಭಾರತದಲ್ಲಿ ಪ್ರಬಲರಾದ ಮೇಲೆ ರಜಪುತಾನರನ್ನು ಮರಾಠರು ಮತ್ತು ಪಿಂಡಾರಿಗಳ ಹಿಡಿತದಿಂದ ಬಿಡಿಸಲು ಶ್ರಮಿಸಿದರು. 1817ರಲ್ಲಿ ಅಮೀರ್‍ಖಾನನು ಶರಣಾದ. ಅನೇಕ ಸರಣಿಯುದ್ಧಗಳ ಅನಂತರ 1840ರ ಹೊತ್ತಿಗೆ ಮರಾಠರು ರಜಪುತಾನದ ಮೇಲಿನ ತಮ್ಮ ಹಿಡಿತವನ್ನು ಬಿಟ್ಟುಕೊಟ್ಟರು. ಬ್ರಿಟಿಷರು ವಿವಿಧ ದೇಶೀಯ ಸಂಸ್ಥಾನಗಳಿಗೆ ಮಾನ್ಯತೆ ನೀಡಿದರು. ಅಜ್ಮೀರ್ ಮತ್ತು ಮೇವಾರಗಳನ್ನೊಳಗೊಂಡ ಚಿಕ್ಕ ಬ್ರಿಟಿಷ್ ಪ್ರಾಂತ ರಚನೆಯಾಯಿತು. ವಿವಿಧ ಸಂಸ್ಥಾನಗಳಲ್ಲಿ ಬ್ರಿಟಿಷ್ ರೆಸಿಡೆಂಟರ ಮತ್ತು ರಾಜಕೀಯ ಏಜೆಂಟರ ನೇಮಕವಾಯಿತು.

	ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ರಾಜಸ್ತಾನ ಹೆಚ್ಚಿನ ಪ್ರಗತಿ ಸಾಧಿಸಲಿಲ್ಲ. ಆದರೆ ಧಾರ್ಮಿಕ ಪುನಶ್ಚೇತನವಾಯಿತು ಮತ್ತು ರಾಷ್ಟ್ರೀಯ ಪ್ರಜ್ಞೆ ಬೆಳೆಯಿತು. ಉದಯಪುರದಲ್ಲಿ ಮಹರ್ಷಿ ದಯಾನಂದರು `ಸತ್ಯಾರ್ಥ ಪ್ರಕಾಶವನ್ನು ರಚಿಸಿ ವೈದಿಕಧರ್ಮದ ಸಿದ್ಧಾಂತಗಳನ್ನು ಪ್ರಚುರಪಡಿಸಿದರು. ಜೈನ ಸಾಧುಸಂತರು ಧರ್ಮಭೋಧನೆಯಲ್ಲಿ ತೊಡಗಿದರು. ಅಜ್ಮೀರ್ ರಾಜಕೀಯ ಚಟುವಟಿಕೆಗಳ ಕೇಂದ್ರವಾಯಿತು. ಅರ್ಜುನ್ ಲಾಲ್ ಸೇಥಿ. ಮನಿಕ್‍ಲಾಲ್ ವರ್ಮ, ಗೋಪಾಲ್‍ಸಿಂಗ್ ಮತ್ತು ಜೈನಾರಾಯಣ ವ್ಯಾಸರಂತಹ ನಾಯಕರುಗಳು ರಾಜಕೀಯ ಪ್ರಜ್ಞೆಯನ್ನು ಬೆಳೆಸಿದರು.

	ಸ್ವಾತಂತ್ರ್ಯ ಚಳವಳಿಯಲ್ಲಿ ಈ ರಾಜ್ಯದ ಕಾಣಿಕೆ ದೊಡ್ಡದು. ಫೈಜ್‍ಪುರದಲ್ಲಿ 1937ರಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಜವಾಹರಲಾಲ್ ನೆಹರೂರವರು ಅದರ ಅಧ್ಯಕ್ಷತೆ ವಹಿಸಿದ್ದರು. 1938ರಲ್ಲಿ ಹರಿಪುರದಲ್ಲಿ ನಡೆದ ಸಮ್ಮೇಳನಕ್ಕೆ ಸುಭಾಷ್‍ಚಂದ್ರ ಬೋಸ್‍ರವರು ಅಧ್ಯಕ್ಷರಾಗಿದ್ದರು. ಪಟ್ಟಾಭಿಸೀತಾರಾಮಯ್ಯನವರ ಅಧ್ಯಕ್ಷತೆಯಲ್ಲಿ 1948ರಲ್ಲಿ ಜಯಪುರದಲ್ಲಿ ಕಾಂಗ್ರೆಸ್ ಅಧಿವೇಶನ ಸೇರಿತ್ತು. 

ಭಾಷಾವಾರು ಪ್ರಾಂತ್ಯ ರಚನೆ : ರಜಪುತಾನ ಎಂದು ಹೆಸರಾಗಿದ್ದ ರಾಜಸ್ತಾನ ಸ್ವಾತಂತ್ರ್ಯ ಪೂರ್ವದಲ್ಲಿ ರಾಜರುಗಳ ತವರೇ ಆಗಿದ್ದಿತು. ಸ್ವಾತಂತ್ರ್ಯಾ ನಂತರ ಅವರು ಆಳುತ್ತಿದ್ದ ಸಂಸ್ಥಾನಗಳನ್ನು ಹಂತಹಂತವಾಗಿ ವಿಲೀನಗೊಳಿಸಲಾಯಿತು. 1948ರ ಮಾರ್ಚ್ 17ರಂದು ಮತ್ಸ್ಯಒಕ್ಕೂಟವೆಂದು ಕರೆಯಲಾದ ಆಳ್ವಾರ್, ಭರತ್‍ಪುರ್, ಧೋಲ್‍ಪುರ್ ಮತ್ತು ಕರೌಲ ಈ ನಾಲ್ಕು ಸಂಸ್ಥಾನಗಳು ಒಂದಾದವು. ಎರಡನೆಯ ಹಂತದಲ್ಲಿ ಮಾರ್ಚ್ 25ರಂದು ಬುಂದಿ, ಡುಂಗರ್‍ಪುರ್, ಜಲ್‍ವಾರ್, ಕಿಷನ್‍ಗರ್, ಕೊಟ, ಪ್ರತಾಪಗರ್, ಶಹಪುರ, ಬನ್ಸ್‍ವಾರ ಮತ್ತು ಟೊಂಕ್-ಈ ಒಂಬತ್ತು ಸಂಸ್ಥಾನಗಳು ಮತ್ಸ್ಯೊಕ್ಕೂಟಕ್ಕೆ ಸೇರಿದವು. ಉದಯಪರ ಸಂಸ್ಥಾನ ಏಪ್ರಿಲ್ 18ರಂದು ಒಕ್ಕೂಟದೊಂದಿಗೆ ವಿಲೀನವಾಯಿತು. 1949 ಮಾರ್ಚ್‍ನಲ್ಲಿ ದೊಡ್ಡ ಸಂಸ್ಥಾನಗಳಾಗಿದ್ದ ಬಿಕನೇರ್, ಜಯಪುರ ರಾಜ್ಯಗಳನೆಸಿದವು. 1950ರಲ್ಲಿ ನಿರೂಡಿ ಸಂಸ್ಥಾನ ಸೇರಿಕೊಂಡಿತು. ಈ ವಿಶಾಲ ರಾಜಸ್ತಾನಕ್ಕೆ 1956 ನವೆಂಬರ್ 1ರಂದು ಅಜ್ಮೀರ್ ಸಂಸ್ಥಾನ, ಅಬುತಹಸಿಲ್ ಮತ್ತು ಸೆನೆಲ್ ತುಪ್ಪ ಪ್ರದೇಶಗಳ ಸೇರ್ಪಡೆಯಾಯಿತು. ಇಲ್ಲಿಗೆ ಒಂದು ಮಹಾ ಐತಿಹಾಸಿಕ ವಿಲೀನದ ಪ್ರಕ್ರಿಯೆ ಮುಗಿದು ಇಂದಿನ ರಾಜಸ್ತಾನ ರೂಪುಗೊಂಡಿತು.
ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳಗಳು : ಕೋಟೆ ಕೊತ್ತಲಗಳ ರಾಜ್ಯವೆಂದೇ ಪ್ರಸಿದ್ಧವಾದ ರಾಜಸ್ತಾನ ಭವ್ಯ ಇತಿಹಾಸವನ್ನು ಹೊಂದಿರುವಂತೆಯೇ ಅನೇಕ ಐತಿಹಾಸಿಕ ಸ್ಥಳಗಳನ್ನು ಹೊಂದಿದೆ. ಭಾರತದ 18 ಪ್ರಮುಖ ಕೋಟೆಗಳಲ್ಲಿ 5 ರಾಜಸ್ತಾನದಲ್ಲಿವೆ. ಇಲ್ಲಿನ ಅನೇಕ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಚಿತ್ತೋರ್‍ಗಢ ಮೇವಾರ್ ರಾಜ್ಯದ ರಾಜಧಾನಿಯಾಗಿದ್ದಿತು. ಇದು ಈಗ ಜಿಲ್ಲಾ ಕೇಂದ್ರವಾಗಿದೆ. ಮಹಾಭಾರತ ಭೀಮ ಇಲ್ಲಿಯ ಕೋಟೆಯನ್ನು ಕಟ್ಟಿಸಿದನೆಂಬ ಪ್ರತೀತಿ ಇದೆ. ಐತಿಹಾಸಿಕವಾಗಿ ಈ ಕೋಟೆಯನ್ನು 734ರಲ್ಲಿ ಬಾಪಾರಾವಲನು ಕಟ್ಟಿಸಿದನೆಂದು ತಿಳಿದುಬರುತ್ತದೆ. ಚಿತ್ರಕೋಟೆ ಎಂಬುದು ಇದರ ಪ್ರಾಚೀನ ಹೆಸರು. ಇದು ಸಮತಟ್ಟು ಜಾಗದಿಂದ 152.4 ಮೀ ಎತ್ತರದಲ್ಲಿದೆ. ಉದ್ದ 5.6 ಕಿಮೀ. ಒಳಗಡೆ ಕೀರ್ತಿಸ್ತಂಭ, ಜಯಸ್ತಂಭಗಳೆಂಬ ಎರಡು ಪ್ರಾಚೀನರಚನೆಗಳಿವೆ. ಎರಡನೆಯದು 36.5ಮೀ ಉದ್ದವಿದೆ. (ನೋಡಿ- ಚಿತ್ತೂರು) ಜಿಲ್ಲಾ ಕೇಂದ್ರವಾದ ಉದಯಪುರ ಇನ್ನೊಂದು ಐತಿಹಾಸಿಕ ಸ್ಥಳ. 1570ರಲ್ಲಿ ಮೇವಾರದ ಮಹಾರಾಣ ಉದಯ ಸಿಂಹ ಇದನ್ನು ಸ್ಥಾಪಿಸಿದ. (ನೋಡಿ- ಉದಯಪುರ) ನಗರದ ಸುತ್ತ ಸು. 30 ಮೀ ಎತ್ತರದ ಕೋಟೆಯಿದೆ. ಇಲ್ಲಿರುವ ಅರಮನೆ ಇಡೀ ರಾಜಸ್ತಾನದಲ್ಲಿರುವ ಅರಮನೆಗಳಲ್ಲಿ ಅತ್ಯಂತ ದೊಡ್ಡದು. ಸಮೀಪದಲ್ಲಿರುವ ಪಿಛೋಲ ಸರೋವರ ಮತ್ತು ಅಲ್ಲಿಯ ಅಮೃತಶಿಲೆಯ ಎರಡು ಅರಮನೆಗಳು ಪ್ರೇಕ್ಷಣಿಯವಾದವು. ಉದಯಪುರದ ಆಗ್ನೇಯಕ್ಕೆ 51ಕಿಮೀ ದೂರದಲ್ಲಿರುವ ಥೇಬರ್ ಅಥವಾ ಜೈ ಸಮಂದ್ ಸರೋವರ 52 ಚಕಿಮೀ ವಿಸ್ತಾರವಿದೆ.

ಚಿತ್ತೋರ್‍ಗಢ ಜಿಲ್ಲೆಯಲ್ಲಿರುವ ಪ್ರತಾಪಗಢವನ್ನು 1689ರಲ್ಲಿ ಪ್ರತಾಪಸಿಂಹ ನಿರ್ಮಿಸಿದ. ಇಲ್ಲಿ ಕೋಟೆ, ಅರಮನೆ, ಹಿಂದೂ ಹಾಗೂ ಜೈನಮಂದಿರಗಳಿವೆ. ಜೋಧಪುರವನ್ನು ಕನೌಜ್‍ನ ಜಯಚಂದ್ರನ ವಂಶದ ಜೋಧ ಎಂಬವನು ಹದಿಮೂರನೆಯ ಶತಮಾನದಲ್ಲಿ ಸ್ಥಾಪಿಸಿದ. ಈಗ ಇದು ಜಿಲ್ಲಾ ಕೇಂದ್ರ. ರಾಜ್ಯದ ಎರಡನೆಯ ದೊಡ್ಡ ನಗರವಾದ ಇದು ದಕ್ಷಿಣ ರಾಜಸ್ತಾನದಲ್ಲಿ ಲೂನಿ ನದಿಯ ದಡದಲ್ಲಿದೆ. ನಗರದ ಸುತ್ತಲೂ ಕಲ್ಲಿನ ಗೋಡೆಯಿದೆ. ಆದರೊಳಗೊಂದು ಕೋಟೆಯಿದೆ, ಅರಮನೆ ಇದೆ. ಸೂರಸಿಂಗ್ ಕಟ್ಟಿಸಿದ ಮೋತಿಮಹಲ್ ಮತ್ತು ಅಬಿನಯಸಿಂಗ್ ಕಟ್ಟಿಸಿದ ಪೂಲ್‍ಮಹಲ್ ಸುಂದರವಾಗಿವೆ; ಅನೇಕ ಭವನಗಳಿವೆ. ಸರ್ಕಾರ್ ವಸ್ತುಸಂಗ್ರಹಾಲಯವಿದೆ. (ನೋಡಿ- ಜೋಧಪುರ) ಮಾರವಾಡ ಸಂಸ್ಥಾನದ ರಾಜಧಾನಿಯಾಗಿದ್ದ ಮಂಡೋರ್ ಜೋಧ್‍ಪುರದಿಂದ 8 ಕಿಮೀ ದೂರದಲ್ಲಿದೆ. ಇಲ್ಲಿ ಸ್ಮಾರಕಗಳು ಮತ್ತು ಮುಸ್ಲಿಂ ಸಂತರ ಗೋರಿಗಳಿವೆ.

ಜಯಪುರ ರಾಜಸ್ತಾನ ರಾಜ್ಯದ ರಾಜಧಾನಿ. ಇದು ದೆಹಲಿಯ ನೈಋತ್ಯಕ್ಕೆ 305 ಕಿಮೀ ದೂರದಲ್ಲಿದೆ. ಭಾರತದ ಸುಂದರನಗರಗಳಲ್ಲಿ ಒಂದು. 1727ರಲ್ಲಿ ಮಹಾರಾಜ ಸವಾಯಿ ಜಯಸಿಂಹ ಇದನ್ನು ಸ್ಥಾಪಿಸಿದ. (ನೋಡಿ- ಜಯಪುರ) ಹಳೆ ನಗರದ ಸುತ್ತ ಕೋಟೆಯಿದ್ದು ಎಂಟು ದ್ವಾರಗಳಿವೆ. ಖಗೋಳ ವೀಕ್ಷಣಾಲಯ ಜಂತರ್‍ಮಂತರ್ ಪ್ರಸಿದ್ಧವಾದುದು. ಜಯಪುರದ ಅರಮನೆ ಏಳು ಮಹಡಿಗಳ ಮಹಾಸೌಧ, ಮೊಸಳೆಕೊಳ, ಆಲ್ಬರ್ಟ್ ಹಾಲ್ ವಸ್ತು ಸಂಗ್ರಹಾಲಯ, ಜೈನಮಂದಿರ-ಇವು ಇತರ ಆಕರ್ಷಣೀಯ ಸ್ಥಳಗಳಾಗಿವೆ. ಸಮೀಪದ ಅಂಬರ್ ಬೆಟ್ಟದಲ್ಲಿ ಪ್ರಾಚೀನ ರಾಜಧಾನಿಯ ಅವಶೇಷಗಳಿವೆ. ರಜಪೂತ ಶೈಲಿಯ ವಸ್ತುಗಳು ದೊರೆಯುತ್ತವೆ. 65 ಕಿಮೀ ದೂರದ ಸಂಬಾರ್ ಸರೋವರ ರಮ್ಯವಾಗಿದೆ.

ಜೈಸಲ್ಮೇರ್ ಇನ್ನೊಂದು ಪ್ರೇಕ್ಷಣೀಯ ಸ್ಥಳ, ಜಿಲ್ಲಾ ಕೇಂದ್ರ. ಇದು ಮರುಭೂಮಿಯ ನಡುವಿರುವ ಹಳೆಯ ಸಂಸ್ಥಾನದ ರಾಜಧಾನಿ. ಇಲ್ಲಿ ಕೋಟೆ, ಅರಮನೆ ಇದೆ. ಅಜ್ಮೀರ್ ರಾಜಸ್ತಾನದ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲೊಂದು. ಇದನ್ನು ಹನ್ನೊಂದನೆಯ ಶತಮಾನದ ಕೊನೆಯಲ್ಲಿ ಚೌಹಾನ್ ವಂಶದ ರಾಜ ಅಜಮದೇವ ನಿರ್ಮಿಸಿದ. ಇಲ್ಲಿನ ಕೋಟೆಗೋಡೆ ಶಿಥಿಲಾವಸ್ಥೆಯಲ್ಲಿದೆ. ಅರಾವಳಿಬೆಟ್ಟದ ಇಳಿಜಾರಿನಲ್ಲಿರುವ ಈ ಊರು ಸದಾ ರಾಜಕೀಯ ಚಟುವಟಿಕೆಯ ಕೇಂದ್ರವಾಗಿ ಅದರ ಆಳ್ವಿಕೆ ಕೈಯಿಂದ ಕೈಗೆ ಬದಲಾಯಿತು. ರಜಪೂತರು, ಮಹಮದೀಯರು, ಬ್ರಿಟಿಷರು ಇಲ್ಲಿ ಆಳಿದರು. ಖ್ಯಾತ ಮುಸ್ಲಿಂ ಸಂತ ಮುಮಿನ್-ಉದ್-ದಿನ್‍ನ ಸಮಾಧಿಯಿದೆ. ಅಕ್ಬರ್ ದೊರೆ ತನ್ನ ರಾಣಿಯೊಂದಿಗೆ ಆಗ್ರಾದಿಂದ ಇಲ್ಲಿಗೆ ಪಾದಯಾತ್ರೆಯಲ್ಲಿ ಬಂದು ಮಕ್ಕಳಿಗಾಗಿ ಪ್ರಾರ್ಥಿಸಿ ಹೋದನೆಂದು ತಿಳಿದು ಬರುತ್ತದೆ. ಸಮೀಪದ ತಾರ್‍ಗರ್ ಬೆಟ್ಟದಲ್ಲಿ ಪ್ರಾಚೀನ ಜೈನಮಂದಿರವಿದೆ. ಭಾರತದಲ್ಲಿ ವಿರಳವಾಗಿ ಕಂಡುಬರುವ ಬ್ರಹ್ಮ ದೇವಸ್ಥಾನ ಇಲ್ಲಿಗೆ 12 ಕಿಮೀ ದೂರದ ಪುಷ್ಕರ್ ಸರೋವರ ಹತ್ತಿರದಲ್ಲಿದೆ. (ನೋಡಿ- ಅಜ್ಮೀರ್)

ಸುತ್ತ ಕಣಿವೆಗಳಿಂದ ರಕ್ಷಿತವಾದ ಕರೌಲಿ ಇನ್ನೊಂದು ಮುಖ್ಯಸ್ಥಳ. ಇದನ್ನು 1348ರಲ್ಲಿ ರಾಜಾ ಅರ್ಜುನಪಾಲ ಸ್ಥಾಪಿಸಿದ. ಇದರ ಮೂಲ ಹೆಸರು ಕಲ್ಯಾಣಪುರಿ. ಇದರ ಸುತ್ತ ಕೆಂಪುಕಲ್ಲಿನ ಗೋಡೆಯಿದೆ. ಅರಮನೆ ಇದೆ. ಜಿಲ್ಲಾ ಕೇಂದ್ರವಾಗಿದೆ. ಧೋಲ್‍ಪುರ ಚಂಬಲ್ ಕಣಿವೆಯಲ್ಲಿರುವ ಊರು. ಜಿಲ್ಲಾ ಕೇಂದ್ರ. ಇದು ರಜಪೂತರ ಪ್ರಾಚೀನ ರಾಜ್ಯಗಳಲ್ಲಿ ಒಂದು. ಅವರು ಇಲ್ಲಿ 792ರಿಂದ 1164ರ ವರೆಗೆ ಆಳಿದರು. ಇಲ್ಲಿನ ಕೋಟೆಯನ್ನು ಷೇರ್‍ಷಾ ವಿಸ್ತರಿಸಿದ್ದರಿಂದ ಅದಕ್ಕೆ ಷೇರ್‍ಗಢ್ ಎಂಬ ಹೆಸರು ಬಂದಿದೆ. 1809ರಲ್ಲಿ ಅಂತಿಮವಾಗಿ ಇದನ್ನು ಬ್ರಿಟಿಷರು ಗ್ವಾಲಿಯರ್ ರಾಜರ ಅಧೀನಕ್ಕೊಪ್ಪಿಸಿದರು. ಇಲ್ಲಿನ ಪ್ರಕೃತಿದೃಶ್ಯ ರಮ್ಯವಾಗಿದೆ.

ನಾಗೌರನ್ನು ಪೃಥ್ವಿರಾಜ ಚೌಹಾನ್ ಆಳುತ್ತಿದ್ದ. ಮುಂದೆ ಇದು ಮಹಮ್ಮದ್ ಘೋರಿಯ ಕೈಸೇರಿ ತರುವಾಯ ಜೋಧ್‍ಪುರದ ಅರಸರ ಆಳ್ವಿಕೆಗೆ ಒಳಪಟ್ಟಿತು. ಇಲ್ಲಿ ಹಳೆಯ ಕೋಟೆ ಇದೆ. ದೇವಾಲಯಗಳಿವೆ. ಐದು ಗೋಪುರಗಳ ಮಸೀದಿ ಇದೆ. ನಾಗೌರ್ ಜಿಲ್ಲೆಯ ಮೆರ್ತ್ ಎಂಬ ಪಟ್ಟಣ ಸಂತ ಮೀರಾಬಾಯಿಯ ಹುಟ್ಟೂರೆಂದು ಪ್ರಸಿದ್ಧವಾಗಿದೆ. ಇಲ್ಲಿ ಮೀರಾಮಂದಿರವಿದೆ.
ದೆಹಲಿ-ಜಯಪುರದ ಮಾರ್ಗದಲ್ಲಿರುವ ಆಳ್ವಾರ್ ಜಿಲ್ಲಾ ಕೇಂದ್ರ. ಇಲ್ಲಿ ವಸ್ತುಸಂಗ್ರಹಾಲಯವಿದ್ದು ಪ್ರಾಚೀನ ಹಸ್ತಪ್ರತಿಗಳು ಮತ್ತು ವರ್ಣಚಿತ್ರಗಳಿವೆ. ಇಲ್ಲಿರುವ 24 ಮೀ ಉದ್ದದ ಸಚಿತ್ರ ಭಾಗವತದ ಹಸ್ತಪ್ರತಿ ಸುರುಳಿ ಪ್ರಸಿದ್ಧವಾದುದು. ಅಕ್ವರ್, ಷಾಜಹಾನ್, ದಾರಶಿಕೋ, ನಾದಿರ್ ಷಾ ಮತ್ತು ಔರಂಗಜೇಬ್ ಉಪಯೋಗಿಸುತ್ತಿದ್ದ ವಸ್ತುಗಳು ಇಲ್ಲಿವೆ. ಇಲ್ಲಿವೆ 13 ಕಿಮೀ ದೂರವಿರುವ ಶಿಲಿಶೇಫ ಸರೋವರ ಪ್ರೇಕ್ಷಣೀಯ ಸ್ಥಳವಾಗಿದೆ.  

ಭರತ್‍ಪುರ್ ಹದಿನೆಂಟನೆಯ ಶತಮಾನದಲ್ಲಿ ಜಾಟ್ ದೊರೆ ಬದನ್‍ಸಿಂಗ್‍ನಿಂದ ಸ್ಥಾಪಿತವಾಯಿತು. (ನೋಡಿ- ಭರತಪುರ) ಇದು ಆಗ್ರಾದ ವಾಯವ್ಯಕ್ಕೆ 55 ಕಿಮೀ ದೂರದಲ್ಲಿದೆ. ಇಲ್ಲಿ ಪ್ರಾಚೀನ ಅವಶೇಷಗಳಿವೆ. ಇಲ್ಲಿಗೆ 3 ಕಿಮೀ ದೂರದಲ್ಲಿ ಪಕ್ಷಿಧಾಮವಿದೆ. ಶಾಂತಿ ಕುಟೀರ ಎಂಬ ವಿಶ್ರಾಂತಿ ಧಾಮವಿದೆ. ಭರತ್‍ಪುರಕ್ಕೆ 33 ಕಿಮೀ ದೂರದಲ್ಲಿರುವ ದಿಗ್ ಪಟ್ಟಣದಲ್ಲಿ ಸೂರಜ್‍ಮಲ್‍ನ ಸುಂದರವಾದ ಅರಮನೆಯಿದೆ.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಆಧ್ಯಾತ್ಮಿಕ ಕೇಂದ್ರಗಳ ಕೇಂದ್ರಸ್ಥಳ ಅಬುಬೆಟ್ಟದಲ್ಲಿದೆ. ದೇಶವಿದೇಶಗಳಿಂದ ಇದರ ಅನುಯಾಯಿಗಳು ಇಲ್ಲಿಗೆ ಬರುತ್ತಾರೆ. ಭರತ್‍ಪುರ್ ಮತ್ತಿತರ ಕಡೆಗಳಲ್ಲಿ ರಾಷ್ಟ್ರೀಯ ಉದ್ಯಾನಗಳಿವೆ. ಹೀಗೆ ಪ್ರಾಚೀನ ಮತ್ತು ಅರ್ವಾಚೀನ ನಿರ್ಮಿತಗಳಿಂದ ಹಾಗೂ ಪ್ರಕೃತಿ ವೈವಿಧ್ಯದಿಂದ ಕೂಡಿರುವ ರಾಜಸ್ತಾನ ಪ್ರವಾಸಿಗರ ಆಕರ್ಷಣೀಯ ರಾಜ್ಯವಾಗಿದೆ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ